ದಾವಣಗೆರೆ: ಹೆಂಡತಿ, ಮಕ್ಕಳಿಲ್ಲದೇ ನೋಡಿಕೊಳ್ಳಲು ಯಾರೂ ಇಲ್ಲದೇ ಕಾಲಿನಲ್ಲಿ ಗಾಯವಾಗಿ ನರಳುತ್ತಿದ್ದ ಅನಾಥನಿಗೆ ಸ್ಥಳೀಯರು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅನಾಥನಿಗೆ ಆಸರೆಯಾದ ಸ್ಥಳೀಯರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿ ನಿವಾಸಿಯಾದ ಪರಶುರಾಮ್ ಎಂಬುವವರಿಗೆ ಕೇರಳದಲ್ಲಿ ಕೆಲಸ ಮಾಡುವ ವೇಳೆ ಕಾಲಿನ ಮೇಲೆ ಕಲ್ಲು ಬಿದ್ದ ಪರಿಣಾಮ ಇಡೀ ಕಾಲಿಗೆ ಗಾಯಗಳಾಗಿದ್ದವು. ಕ್ರಮೇಣ ಕಾಲು ಕೊಳೆಯಲು ಆರಂಭಿಸಿದೆ. ಮನೆಯಲ್ಲಿ ಹಾಸು ಹೊದ್ದ ಬಡತನ ಬೇರೆ. ನೆಲ ಹಿಡಿದು ಐದಾರು ವರ್ಷಗಳೇ ಉರುಳಿದ್ದು, ಇಂಥ ಸಂಕಷ್ಟದ ಪರಿಸ್ಥಿತಿಯಲ್ಲೇ ಗಂಡನ ಆರೈಕೆ ಮಾಡುತ್ತಿದ್ದ ಮಡದಿ ಸಹ ಅಕಾಲಿಕ ಮರಣವನ್ನಪ್ಪಿದ್ದರು. ಇದರಿಂದಾಗಿ ಏಕಾಂಗಿಯಾದ ಪರಶುರಾಮ್‌ಗೆ ದಿಕ್ಕೇ ತೋಚದಾಯಿತು.
ಇಂಥ ದುಸ್ಥಿತಿಯಲ್ಲಿ ಆಸ್ಪತ್ರೆಗೂ ಹೋಗಲಾಗದೇ ಹೈರಾಣಾಗಿದ್ದ ಅವರ ಸಹಾಯಕ್ಕೆ ಬಂದವರು ಯಡಿಹಳ್ಳಿ (Yadihalli Village) ಗ್ರಾಮಸ್ಥರು. ಇಡೀ ಕಾಲು ಕೊಳೆಯುವ ಹಂತಕ್ಕೆ ತಲುಪಿದಾಗ ಯಡಿಹಳ್ಳಿಯ ವಿಶ್ವನಾಥ್ ಎಂಬುವರು ಹಾಗು ಸ್ಥಳೀಯರು ಸೇರಿ ಸ್ಥಳೀಯ ಆಸ್ಪತ್ರೆಗೆ ತೋರಿಸಿದರು. ಆದರೂ ಕಾಲಿನ ಗಾಯ ಸರಿಯಾಗದೆ ಪರಶುರಾಮ್ ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು.ಅವರ ಕಷ್ಟ ನೋಡಲಾಗದೇ ಸ್ಥಳೀಯರು ಇದೀಗ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ (Davanagere Hospital) ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ರೋಗಿ ಪರಶುರಾಮ್ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಶುರಾಮ್ರನ್ನು ಆರೈಕೆ ಮಾಡಲು ಕುಟುಂಬಸ್ಥರು ಯಾರು ಇಲ್ಲದಿದ್ದರಿಂದ ಯಡಿಹಳ್ಳಿ ಗ್ರಾಮಸ್ಥರೇ ಸೇರಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಸತತ ಐದು ವರ್ಷಗಳ ಕಾಲ ಯಡಿಹಳ್ಳಿ ಗ್ರಾಮಸ್ಥರು ಪರಶುರಾಮ್‌ಗೆ ಊಟ, ಬಟ್ಟೆ ಸಹ ನೀಡಿದ್ದಾರೆ.
ಇದನ್ನೂ ಓದಿ:ಚಾಕುವಿನಿಂದ ಇರಿದು ಅಪಾರ್ಟ್ಮೆಂಟ್ ನಿವಾಸಿಯನ್ನೇ ಹತ್ಯೆಗೈದ ಸೆಕ್ಯೂರಿಟಿ ಗಾರ್ಡ್