ದಾವಣಗೆರೆ: ಕಾಂಗ್ರೆಸ್ ಪಕ್ಷದ ಮಹಾತ್ವಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯಾದಂತ್ಯ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ರೇ, ಈ ಯೋಜನೆಯು ಹಣ ವಿಲ್ಲದವರಿಗೆ ಆಸರೆಯಾಗಿದೆ ಎಂದು ಕೆಲ ಮಹಿಳೆಯರು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಇನ್ನು ಮಹಿಳಾ ಬಸ್ ನಿರ್ವಾಹಕಿಯರು ಸಹ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುತ್ತಿರುವುದಕ್ಕೆ ಶುಭಕೋರಿದ್ದಾರೆ.
ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಸಾಕಷ್ಟು ಮಹಿಳಾ ಪ್ರಯಾಣಿಕರು ಗುರುತಿನ ಚೀಟಿ ಹಿಡಿದು ಉಚಿತ ಬಸ್ ಪ್ರಯಾಣ ಮಾಡಲು ಉತ್ಸುಕರಾಗಿದ್ದರು. ಈ ವೇಳೆ ಮಹಿಳಾ ಪ್ರಯಾಣಿಕರಾದ ರೇಣುಕಾ ಮಾತನಾಡಿ, ಹಣವಿಲ್ಲದ ಬಡತನ ರೇಖೆಗಿಂತ ಕೆಳ ಮಟ್ಟದಲ್ಲಿರುವ ಮಹಿಳೆಯರಿಗೆ ಈ ಯೋಜನೆ ಅನುಕೂಲ ಆಗಲಿದ್ದು, ಸಾಕಷ್ಟು ಮಹಿಳೆಯರು ಇದರ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಉಚಿತ ಪ್ರಯಾಣ ಮಾಡಲು ಗುರುತಿನ ಚೀಟಿಯಾದ ಆಧಾರ್ ಕಾರ್ಡ್ನ್ನು ಜೊತೆ ತಂದಿದ್ದೇನೆ. ನಾನು ದಾವಣಗೆರೆಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಪ್ರಯಾಣಿಕರಾದ ಲಕ್ಷ್ಮಿ ಮಾತನಾಡಿ, ಉಚಿತ ಬಸ್ ಪ್ರಯಾಣ ಯೋಜನೆ ಕಷ್ಟದಲ್ಲಿರುವವರಿಗೆ ಅನುಕೂಲ ಆಗಲಿದೆ ಎಂದರು.
ಬಸ್ ನಿರ್ವಾಹಕಿ ರಾಜೇಶ್ವರಿ ಮಾತನಾಡಿ, ಸರ್ಕಾರದ ಈ ಆದೇಶವನ್ನು ಗೌರವಿಸುತ್ತೀವಿ ಹಾಗೂ ಮಹಿಳೆಯರಿಗೆ ಉತ್ತಮವಾದ ಸೇವೆಯನ್ನು ನೀಡುತ್ತೇವೆ. ಮಹಿಳೆ ನಮ್ಮ ರಾಜ್ಯದವರೇ ಎಂಬುದಕ್ಕೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಸರ್ಕಾರದ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡಬಹುದು. ಮೂರು ತಿಂಗಳ ನಂತರ ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ತೋರಿಸಬೇಕು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ತಂದಿರುವುದಕ್ಕೆ ಖುಷಿಯಾಗುತ್ತದೆ. ಬಸ್ ಸಿಬ್ಬಂದಿಗಳೊಂದಿಗೆ ಮಹಿಳೆಯರು ಸಹಕಾರದಿಂದ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.