ಕೊಲೆ ಪ್ರಕರಣ ಬಗ್ಗೆ ಎಸ್ಪಿ ಮಾಹಿತಿ ದಾವಣಗೆರೆ: ಮದುವೆಗೆ ಮನೆಯಲ್ಲಿ ಒಪ್ಪಿಗೆ ಸಿಗದೇ ಮನನೊಂದು ಪ್ರೀತಿಸಿದ ಯುವತಿಯನ್ನು ಕೊಲೆಗೈದು ಬಳಿಕ ತಾನೂ ವಿಷ ಸೇವಿಸಿ ಯುವಕನೊಬ್ಬ ಸಾವಿನ ಹಾದಿ ತುಳಿದಿದ್ದಾನೆ. ವಿನೋಬ ನಗರದ ನಿವಾಸಿ ಚಾಂದ್ ಸುಲ್ತಾನಾ (28) ಕೊಲೆಯಾದ ಯುವತಿ. ಚಾಂದ್ ಪೀರ್ ಅಲಿಯಾಸ್ ಸಾದತ್ (28) ಆತ್ಮಹತ್ಯೆ ಮಾಡಿಕೊಂಡ ಆರೋಪಿ.
ಮೃತರಿಬ್ಬರು ಸೋದರ ಸಂಬಂಧಿಗಳು. ಸುಲ್ತಾನಾ ಎಂಕಾಂ ಪೂರ್ಣಗೊಳಿಸಿ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಾದತ್ ಅನುಕಂಪದ ಆಧಾರದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಗಲಾಟೆ ಮಾಡಿಕೊಂಡು ಕೆಲಸ ಬಿಟ್ಟಿದ್ದನು ಎಂದು ತಿಳಿದು ಬಂದಿದೆ.
ಐದು ವರ್ಷಗಳಿಂದ ಇವರಿಬ್ಬರ ಮದುವೆ ವಿಚಾರವಾಗಿ ಎರಡೂ ಕುಟುಂಬದ ನಡುವೆ ನಾಲ್ಕೈದು ಬಾರಿ ಮಾತುಕತೆ ಆಗಿತ್ತು. ಆದರೆ, ಸಾದತ್ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಹಾಗಾಗಿ ಸುಲ್ತಾನಾ ಮನೆಯವರು ಬೇರೆಡೆ ಸಂಬಂಧ ನೋಡಿ ಏಳು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದರು. ಇನ್ನೊಂದು ತಿಂಗಳಲ್ಲಿ ಆಕೆಯ ಮದುವೆಯೂ ನಿಗದಿಯಾಗಿತ್ತು.
ಆದರೆ, ಸಾದತ್ಗೆ ಸುಲ್ತಾನಾಳನ್ನು ಬಿಟ್ಟಿರಲಾಗದ ಕಾರಣ ದಾವಣಗೆರೆ ನಗರದ ಚರ್ಚ್ ಬಳಿ ಆಕೆಯನ್ನು ಕರೆಸಿಕೊಂಡು ಚಾಕುವಿನಿಂದ ಕತ್ತು ಕುಯ್ದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ಅಸ್ವಸ್ಥನಾಗಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಬ್ಲೇಡ್ ಅಟ್ಯಾಕ್; ತಾನೂ ಕತ್ತು ಕುಯ್ದುಕೊಂಡ ಕಿಡಿಗೇಡಿ