ದಾವಣಗೆರೆ:ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೈಲು ಸೇರಿದ ನಂತರ ತಂದೆಯ ಅನುಪಸ್ಥಿತಿಯಲ್ಲಿ ಪುತ್ರ ಮಾಡಾಳ್ ಮಲ್ಲಿಕಾರ್ಜುನ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವ ಮಾಡಾಳ್ ಮಲ್ಲಿಕಾರ್ಜುನ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ. ಒಂದು ವೇಳೆ ಕಮಲ ಪಕ್ಷದ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಚಿಂತನೆಯಲ್ಲೂ ಮಲ್ಲಿಕಾರ್ಜನ ತೊಡಗಿದ್ದಾರೆ ಎಂಬ ಮಾತುಗಳಿವೆ.
ಇದನ್ನೂ ಓದಿ:ಆಕಾಂಕ್ಷಿಗಳ ಟಿಕೆಟ್ ನೀಡಲು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ
ರಾಜ್ಯ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚುಟವಟಿಕೆಗಳು ಬಿರುಸುಗೊಂಡಿವೆ. ಚನ್ನಗಿರಿ ಮತ ಕ್ಷೇತ್ರದಲ್ಲೂ ಚುನಾವಣೆಯ ಕಾವು ಜೋರಾಗಿದೆ. ಅದರಲ್ಲೂ, ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಜೈಲು ಪಾಲಾಗಿರುವ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಸ್ತುತ ರಾಜಕೀಯ ಲೆಕ್ಕಾಚಾರಗಳು ಎಲ್ಲವನ್ನೂ ಬದಲಾಯಿಸಿವೆ.
ಆಡಳಿತಾರೂಢ ಪಕ್ಷದ ಶಾಸಕರಾದ ಮಾಡಾಳ್ ಚುನಾವಣಾ ಹೊಸ್ತಿನಲ್ಲೇ ಭ್ರಷ್ಟಾಚಾರದ ಆರೋಪ ಪ್ರಕರಣದ ಸುಳಿಯಲ್ಲಿ ಸಿಲುಕಿದ್ದಾರೆ. ಅಲ್ಲದೇ, ಪ್ರಕರಣದಲ್ಲಿ ಜೈಲು ಸೇರಿರುವುದು ಕ್ಷೇತ್ರದಲ್ಲಿ ಪಕ್ಷಕ್ಕೆ ಮುಜುಗರದ ಸನ್ನಿವೇಶ ತಂದೊಡ್ಡುವಂತಾಗಿದೆ. ಇದರ ನಡುವೆ ಪ್ರಸ್ತುತ ಚುನಾವಣೆಯಲ್ಲಿ ವಿರೂಪಾಕ್ಷಪ್ಪಗೆ ಪಕ್ಷದ ಟಿಕೆಟ್ ಬಹುತೇಕ ಕೈತಪ್ಪಬಹುದು ಎಂಬ ಮಾತುಗಳು ರಾಜ್ಯ ಬಿಜೆಪಿಯಲ್ಲಿ ಕೇಳಿಬರುತ್ತಿದೆ.
ಬಿಜೆಪಿ ಟಿಕೆಟ್ ಮೇಲೆ ಮಾಡಾಳ್ ಪುತ್ರನ ಕಣ್ಣು:ಜೈಲಿನಲ್ಲಿರುವ ತಂದೆಗೆ ಪಕ್ಷದ ಟಿಕೆಟ್ ಸಿಗುವುದು ಅನುಮಾನವಿರುವ ಕಾರಣ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅಖಾಡಕ್ಕೆ ಇಳಿದಿದ್ದಾರೆ. ಇದಕ್ಕೂ ಮೇಲಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿ ಕೂಡ ಆಗಿದ್ದಾರೆ. ಈಗಾಗಲೇ ಪಕ್ಷದ ಟಿಕೆಟ್ ಘೋಷಣೆಗಾಗಿ ಕಾದು ಕುಳಿತಿದ್ದಾರೆ.