ದಾವಣಗೆರೆ:ತನ್ನ ಪತ್ನಿಯ ಶೀಲ ಶಂಕಿಸಿ ಪತಿಯೋರ್ವ ಜಗಳವಾಡಿ, ಪತ್ನಿಯ ಗುಪ್ತಾಂಗಕ್ಕೆ ವಿಕೆಟ್ನಿಂದ ಮನಸೋಇಚ್ಛೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಕಳೆದ ದಿನ ನಡೆದಿದೆ. ಪತ್ನಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪತ್ನಿ ಮೇಲೆ ಪತಿ ಅಮಾನವೀಯಾವಾಗಿ ಹಲ್ಲೆ ಮಾಡಿದ್ದಾನೆ. ಆರೋಗ್ಯ ಇಲಾಖೆಯಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ಪತಿ ಸೈಕೋ ರೀತಿ ವರ್ತಿಸುತ್ತಿದ್ದ ಎಂದು ಚಳ್ಳಕೆರೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚಿಗೆ ಆರೋಪಿ ಪತಿ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದಾ ಮನೆಯಲ್ಲಿ ಹೆಂಡತಿ ಮೇಲೆ ಅನುಮಾನ ಪಡುತ್ತಿದ್ದ ಪತಿ ಕಳೆದ ದಿನ ಹೆಂಡತಿ ಬಳಿ ಜಗಳ ತೆಗೆದಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಪತಿ ಈ ರೀತಿ ವಿಕೃತಿ ಮೆರೆದಿದ್ದಾನೆ.
ಕ್ರಿಕೆಟ್ ವಿಕೆಟ್ನಿಂದ ಮನಸೋಯಿಚ್ಛೆ ಹಲ್ಲೆ!:ಪತಿ ಗಲಾಟೆ ಮಾಡಿ ಪತ್ನಿ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯಲ್ಲಿದ್ದ ಮಕ್ಕಳಾಡುವ ವಿಕೆಟ್ನಿಂದ ಪತ್ನಿಯ ಗುಪ್ತಾಂಗಕ್ಕೆ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದ ಪರಿಣಾಮ ಇಡೀ ಮನೆಯ ಗೋಡೆಗಳಿಗೆ ರಕ್ತದ ಕಲೆಗಳು ಅಂಟಿಕೊಂಡಿವೆ. ಮಾಹಿತಿ ತಿಳಿದ ಚಳ್ಳಕೆರೆ ಠಾಣೆಯ ಪೊಲೀಸರು ಘಟನೆ ನಡೆದ ಬಳಿಕ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಇನ್ನು, ಈ ಘಟನೆ ಜರುಗಿದ ಬಳಿಕ ಆರೋಪಿ ಪತಿ ತಾನು ಮುಗ್ಧ ಎಂಬಂತೆ ಬಿಂಬಿಸಲು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಲ್ಲೆ ನಡೆದ ಕೆಲವೇ ಗಂಟೆಯಲ್ಲಿ ಚಳ್ಳಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದರ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ನಿ:ಇನ್ನು ಹಲ್ಲೆಗೊಳಗಾದ ಪತ್ನಿಯನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಕುಟುಂಬಸ್ಥರು ಆರೈಕೆ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆದು ಪತ್ನಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದ್ದು, ಚಿಕಿತ್ಸೆ ಮುಂದುವರೆದಿದೆ. ಈ ರೀತಿ ವಿಕೃತಿ ಮೆರೆದಿರುವ ಘಟನೆಯಿಂದ ಇಡೀ ಚಳ್ಳಕೆರೆ ಜನ ಬೆಚ್ಚಿಬಿದ್ದಿದ್ದು, ಆರೋಪಿ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಇದನ್ನೂ ಓದಿ :ಅತ್ಯಾಚಾರ ಆರೋಪ: ಡ್ಯಾನ್ಸ್ ಮಾಸ್ಟರ್ ಸೇರಿ ಮೂವರ ಬಂಧನ