ದಾವಣಗೆರೆ :ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಅವರೇ ಸಚಿವರಾಗಬೇಕಾ?. ಹೊಸ ಮುಖಗಳಿಗೆ ಅವಕಾಶ ನೀಡಿ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಪಕ್ಷದ ವರಷ್ಠರಿಗೆ ಮನವಿ ಮಾಡಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ಸಚಿವರ ವಿರುದ್ಧ ತಮ್ಮದೇ ರೀತಿಯಲ್ಲಿ ಅಸಮಾಧಾನ ಹೊರ ಹಾಕಿದರು.
ಅವರೇ ಸಚಿವರಾಗಬೇಕಾ?: ಹೊಸ ಮುಖಗಳಿಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ಪ್ರತಿ ಬಾರಿ ಸರ್ಕಾರ ಬಂದಾಗ ಅವರಿಗೇ ಸಚಿವ ಸ್ಥಾನ ನೀಡುತ್ತಿದ್ದಾರೆ. ಪಕ್ಷದಲ್ಲಿ ಅವರೇನಾ ಇರೋದು? ಬೇರೆಯವರು ಯಾರೂ ಇಲ್ವೇ? ನನಗೂ ಸಚಿವ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಜೊತೆಗೆ ಹೊಸಬರಿಗೆ ಅವಕಾಶ ನೀಡಿ ಎಂದೂ ಸಹ ಹೇಳಿದ್ದೇನೆ. ಮೂರು ಬಾರಿ ಶಾಸಕ, ಒಮ್ಮೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಹಾದಿ ಬೀದಿಯಲ್ಲಿ ಕೇಳುತ್ತಿಲ್ಲ. ಎಲ್ಲಿ ಕೇಳಬೇಕೋ ಅಲ್ಲಿ ಕೇಳಿದ್ದೇನೆ ಎಂದರು.
ಸಚಿವ ಸ್ಥಾನದ ಅವಕಾಶದ ಕುರಿತಂತೆ ಶಾಸಕ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿರುವುದು.. ವಿಜಯೇಂದ್ರನ ಹೆಸರು ಎಂಎಲ್ಸಿ ಪಟ್ಟಿಯಲ್ಲಿದೆ :ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನು ಎಂಎಲ್ಸಿ ಮಾಡುವುದಕ್ಕೆ ಅವರ ಹೆಸರು ಕೋರ್ ಕಮಿಟಿ ಪಟ್ಟಿಯಲಿದೆ ಎಂಬ ಬಗ್ಗೆ ಕೇಳಿದ್ದೇನೆ. ಅವರ ಹೆಸರು ಪಟ್ಟಿಯಲ್ಲಿದೆ ಎನ್ನುವುದನ್ನು ಮಾಧ್ಯಮಗಳಿಂದಲೂ ಕೇಳಿದ್ದೇನೆ. ಅವರ ಎಂಎಲ್ಸಿ ಆಯ್ಕೆ ಬಗ್ಗೆ ಕೇಂದ್ರ ವರಿಷ್ಠರು ನಿರ್ಣಯ ಮಾಡುತ್ತಾರೆ. ರಾಜ್ಯದ ಹಿತದೃಷ್ಟಿಯಿಂದ ಏನ್ ಮಾಡ್ತಾರೋ ನೋಡಬೇಕಿದೆ. ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ಮಾಡಿ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ದಾವಣಗೆರೆಗೆ ಸಚಿವ ಸ್ಥಾನ ಸಿಗದೆ ವಂಚಿತವಾಗಿದೆ : ಮಧ್ಯ ಕರ್ನಾಟಕದ ಜಿಲ್ಲೆ ದಾವಣಗೆರೆ ಸಚಿವ ಸ್ಥಾನದಿಂದ ವಂಚಿತವಾಗಿದೆ. ಯಾರಿಗಾದ್ರೂ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಎಲ್ಲರಲ್ಲಿ ಮನವಿ ಮಾಡಿದ್ದೇವೆ. ನಮ್ಮ ಎಲ್ಲ ಶಾಸಕರ, ಸಂಸದರು ಮತ್ತು ಉಸ್ತುವಾರಿ ಸಚಿವರ ಆಗ್ರಹವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅವರು ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿ ಎಂದಿದ್ದಾರೆ. ನನಗೂ ಸಚಿವ ಸ್ಥಾನ ಕೊಡಿ ಎಂದು ಎಲ್ಲರ ಜೊತೆ ಕೇಳಿದ್ದೇನೆ. ಆದರೂ ಫಲಿಸಿಲ್ಲ ಎಂದರು.
ಮಳೆಯಿಂದ ಭಾರೀ ನಷ್ಟ:ಅಕಾಲಿಕ ಮಳೆಯಿಂದ ನ್ಯಾಮತಿ ಹೊನ್ನಾಳಿಯಲ್ಲಿ ಅಪಾರ ಪ್ರಮಾಣದ ನಷ್ಟವಾಗಿದೆ. ನಾಳೆಯೇ ಕಂದಾಯ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ. ಎರಡು ತಾಲೂಕುಗಳನ್ನು ಅತಿವೃಷ್ಠಿ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡುತ್ತೇನೆ. ಎಲ್ಲರಿಗೂ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ. ಮೂರು ದಿನಗಳಿಂದ ನಿರಂತರವಾಗಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಹೋದ ಪುಟ್ಟ ಬಂದ ಪುಟ್ಟ ಎನ್ನುವಂತೆ ಅಲ್ಲ. ಅಧಿಕಾರಿಗಳ ಜೊತೆ ಖುದ್ದಾಗಿ ಭೇಟಿ ನೀಡಿದ್ದೇನೆ ಎಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡರು.