ಹರಿಹರ (ದಾವಣಗೆರೆ): 180ಕ್ಕೂ ಹೆಚ್ಚು ದಿನ ನೀರು ಹರಿಸುವ ಮೂಲಕ ರೈತರ ಜೀವನಾಡಿಯಾಗಿರುವ 22 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ತಾಲೂಕಿನ ರಾಜನಹಳ್ಳಿಯಲ್ಲಿರುವ ಏತ ನೀರಾವರಿ ಘಟಕದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 22 ಕೆರೆಗಳ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತೀ ಬಾರಿ ಜುಲೈ ತಿಂಗಳ ಮಧ್ಯದಲ್ಲಿ ನೀರು ಪೂರೈಸುವ ಕಾರ್ಯ ಪ್ರಾರಂಭಿಸಲಾಗುತ್ತಿತ್ತು. ಆದರೆ ಈ ಬಾರಿ ಜೂನ್ ತಿಂಗಳಿಂದ ನೀರು ಪೂರೈಕೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಯೋಜನೆಯ 22 ಕೆರೆಗಳು ತುಂಬುವ ಭರವಸೆ ಇದೆ ಎಂದು ತಿಳಿಸಿದರು.
ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ಈ ಬಾರಿ ಜೂನ್ ತಿಂಗಳಿಂದ ನವೆಂಬರ್ ತಿಂಗಳವರೆಗೂ ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ಪೂರೈಸಲಾಗುತ್ತದೆ. ರೈತರು ತಮ್ಮ ಕೆರೆಗಳಿಗೆ ನೀರು ಬಂದಾಗ ಹರಿಸಿಕೊಂಡು ನಂತರ ಮತ್ತೊಂದು ಕೆರೆಗೆ ನೀರು ಹರಿಯಲು ಅವಕಾಶ ಮಾಡಿಕೊಡಬೇಕು. ಅದನ್ನ ಬಿಟ್ಟು ಹೆಚ್ಚು ನೀರು ಪಡೆಯುವ ಉದ್ದೇಶದಿಂದ ವಾಲ್ಗಳನ್ನು ಮುರಿಯುವುದು, ಪೈಪ್ ಒಡೆಯುವ ಕೆಟ್ಟ ಕೆಲಸಕ್ಕೆ ಮುಂದಾಗಬೇಡಿ. ಈ ರೀತಿ ಮಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎಂದರು.
ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳ ಗಮನ ಸೆಳೆದು ಬಡವರು ಹಾಗೂ ರೈತರಿಗೆ ಕುಡಿಯುವ ನೀರನ್ನು ಪೂರೈಸುವಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಮುಂದಾಲೋಚನೆಯಿಂದ ಮಲ್ಲಶೆಟ್ಟಿಹಳ್ಳಿಯಲ್ಲಿ ಸುಸಜ್ಜಿತ ಹಾಗೂ ವಿಶಾಲವಾದ 12 ಎಕರೆ ವಿಸ್ತೀರ್ಣದಲ್ಲಿ ಕೆರೆಯನ್ನು ನಿರ್ಮಿಸಿಕೊಂಡು ನೀರು ಶೇಖರಿಸಿ ಅಲ್ಲಿಂದ 22 ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಈ ವೆಳೆ ತಾಲೂಕಿನ ದೀಟೂರು ಗ್ರಾಮದಿಂದ ಜಗಳೂರು ತಾಲೂಕಿನ 57 ಕೆರೆಗಳಿಗೆ ನೀರನ್ನು ಪೂರೈಕೆ ಮಾಡುವ ಏತ ನೀರಾವರಿ ಯೋಜನೆಯ ಕಾಮಗಾರಿ ವೀಕ್ಷಿಸಿದರು.