ದಾವಣಗೆರೆ: ಚನ್ನಗಿರಿಯ ಸೂಳೆಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ತಕ್ಷಣ ಎಚ್ಚೆತ್ತುಕೊಂಡಿರುವ ಜಿಲ್ಲಾ ಸರ್ವೇಕ್ಷಣಾ ಇಲಾಖೆ ಜಿಲ್ಲೆಯ ಬೇರೆ ಬೇರೆ ಕಡೆಗಳ ನೀರು ಪರೀಕ್ಷೆ ಮಾಡುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 250ಕ್ಕೂ ಹೆಚ್ಚು ಕಡೆ ನೀರು ಪರೀಕ್ಷೆ ಮಾಡಲಾಗಿದ್ದು, ಆತಂಕಕಾರಿ ವರದಿ ಹೊರಬಿದ್ದಿದೆ.
ಜಿಲ್ಲಾ ಸರ್ವೇಕ್ಷಣಾ ಇಲಾಖೆಯು ಜನವರಿಯಿಂದ ಆಗಸ್ಟ್‌ವರೆಗೆ ಒಟ್ಟು 60,154 ವಿವಿಧ ಭಾಗದಲ್ಲಿ ನೀರಿನ ಪರೀಕ್ಷೆ ಮಾಡಿದ್ದು, ಅದರಲ್ಲಿ 28 ಕಡೆ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಗ್ರಾಮಗಳಲ್ಲಿ ಕುಡಿಯುವ ನೀರು ಸ್ಥಗಿತಗೊಳಿಸಿ ಸ್ವಚ್ಛಗೊಳಿಸಿದ ಬಳಿಕ ಕುಡಿಯಲು ನೀರು ನೀಡಿರುವ ಘಟನೆ ನಡೆದಿದೆ.
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಬಾವಿ, ಬೋರ್ವೆಲ್, ಟ್ಯಾಂಕ್ಗಳು, ಕೆರೆಗಳು, ಎಲ್ಲೆಲ್ಲಿ ಕುಡಿಯುವ ನೀರಿನ ಮೂಲ ಇದೆಯೋ, ಅಂತಹ ನೀರನ್ನು ಜಿಲ್ಲಾ ಸರ್ವೇಕ್ಷಣಾ ಇಲಾಖೆ ಪರೀಕ್ಷೆ ಮಾಡುತ್ತಿದೆ. ಸೂಳೆಕೆರೆ ಪ್ರಕರಣಕ್ಕೂ ಮುನ್ನವೇ ಸರ್ವೇಕ್ಷಣಾ ಇಲಾಖೆಯಿಂದ ಪ್ರತಿ ಗ್ರಾಮದಲ್ಲಿ ಈ ಕುಡಿಯುವ ನೀರನ್ನು ಸರ್ವೇಕ್ಷಣಾ ಮಾಡಿ ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ಚನ್ನಗಿರಿಯ ಸೂಳೆಕೆರೆ ಪ್ರಕರಣ ನಡೆದಿದ್ದರಿಂದ ಆಯಾಯ ಗ್ರಾಮಗಳಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಯಾವುದಾದರೂ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ತಕ್ಷಣ ಗ್ರಾ.ಪಂ ಗಮನಕ್ಕೆ ತಂದು ಕುಡಿಯುವ ನೀರಿನ ಮೂಲ ಸ್ವಚ್ಛಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಡಿಹೆಚ್‌ಒ ಮಾಹಿತಿ ನೀಡಿದರು.