ದಾವಣಗೆರೆ: ''ವಿಶ್ವನಾಥ್ಅವರಂತೆ ನಾನು ಬೆಣ್ಣೆ, ಮಸ್ಕಾ ಹೊಡೆದು ವಿಧಾನ ಪರಿಷತ್ ಸದಸ್ಯನಾಗಿಲ್ಲ. ನಾನು ಏಳು ಬಾರಿ ಶಾಸಕನಾಗಿ ಜನ್ರಿಂದ ಆರಿಸಿ ಬಂದಿದ್ದೇನೆ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು'' ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ವಿರುದ್ಧ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಗರಂ ಆಗಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮೊದಲು ನಾನು ಈ ವಿಚಾರವಾಗಿ ಸಿದ್ದರಾಮಯ್ಯನವರ ಬಳಿ ಮಾತನಾಡುತ್ತೇನೆ. ನನ್ನ ಬಳಿ ದಾಖಲೆಗಳಿದ್ದು, ಯಾರಿಗೆ ಯಾವ ಸ್ಥಾನ ಕೊಟ್ಟಿದ್ದಾರೆ ಎಂಬುದನ್ನು ತೋರಿಸುವೆ'' ಎಂದರು.
''ಈಗಿರುವ ಈ ಜಿಲ್ಲಾಧಿಕಾರಿಯನ್ನು ದಾವಣಗೆರೆಗೆ ನೇಮಿಸಿ ಎಂದು ನಾನೇನು ಶಿಫಾರಸು ಮಾಡಿಲ್ಲ. ಎಲ್ಲಾ ದಾಖಲೆಗಳು ನನ್ನ ಬಳಿ ಇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಲಿಂಗಾಯತ ಸಮಾಜದ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗ್ತಿದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಸತ್ಯ ಹೇಳಿದ ಮೇಲೆ ಹಾಗೇ ಆಗೋದು'' ಎಂದರು. ಏಳು ಸಚಿವರನ್ನು ಕೊಟ್ಟಿದ್ದೇವೆ ಎನ್ನುವ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಮನೂರು, ''ನಾವು ಸಚಿವ ಸ್ಥಾನ ಕೇಳಿದ್ವಿ, ನಾವು ನಮ್ಮ ವಿದ್ಯಾವಂತರಿಗೆ ಕೆಎಎಸ್, ಐಪಿಎಸ್ ಆದವರಿಗೆ ಸರಿಯಾದ ಸ್ಥಾನ ಕೊಡಿ ಎಂದು ಕೇಳಿದ್ದೇವೆ. ಯಾರಿಗೆ ಕೀ ಪೋಸ್ಟ್ಗಳನ್ನು ಕೊಟ್ಟಿದ್ದಾರೆ ಎಂದು ನಾನು ತೋರಿಸುವೆ. ಆದರೆ, ನಮ್ಮವರಿಗೆ ಕೀ ಪೋಸ್ಟ್ ಕೊಟ್ಟಿಲ್ಲ'' ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸರ್ಕಾರದ ವಿರುದ್ಧ ಮತ್ತೊಮ್ಮೆ ಗುಟುರು ಹಾಕಿದರು.