ಕರ್ನಾಟಕ

karnataka

ETV Bharat / state

ಕೋವಿಡ್​​ ನಿಯಮ ಉಲ್ಲಂಘನೆ: ದಾವಣಗೆರೆಯಲ್ಲಿ ಜನರಿಂದ ಅರ್ಧ ಕೋಟಿಗೂ ಹೆಚ್ಚು ದಂಡ ವಸೂಲಿ - Violation of the Covid rule news

ಕೊರೊನಾದಿಂದ ಸಾಕಷ್ಟು ಜನರು ಸಂಕಷ್ಟ ಎದುರಿಸಿದ್ದಾರೆ. ಇನ್ನೊಮ್ಮೆ ಈ ಮಹಾಮಾರಿ ವಕ್ಕರಿಸುವುದು ಬೇಡ ಎಂದು ಸೋಂಕಿನಿಂದ ಪಾರಾದವರು ಹೇಳುತ್ತಿದ್ದಾರೆ. ಸರ್ಕಾರ ಸಹ ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡುತ್ತ ಬಂದಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಈವರೆಗೆ 30,218 ಜನರಿಂದ 51. 67 ಲಕ್ಷ ರೂ. ದಂಡ ಸಂಗ್ರಹಿಸಿದೆ.

Covid
ಕೋವಿಡ್​​

By

Published : Oct 29, 2020, 7:16 PM IST

Updated : Oct 29, 2020, 7:22 PM IST

ದಾವಣಗೆರೆ: ಕೊರೊನಾ‌ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬುದಾಗಿ ನಿಯಮ ರೂಪಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಈವರೆಗೆ 30,218 ಜನರಿಂದ 51. 67 ಲಕ್ಷ ರೂ. ದಂಡ ಸಂಗ್ರಹಿಸಿದೆ.

ಈ ಕುರಿತು ಮಾತನಾಡಿದ ಎಸ್​ಪಿ ಹನುಮಂತರಾಯ, ಕೊರೊನಾ‌ ಸೋಂಕು ಹರಡುವಿಕೆ ತಡೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಜನರಿಗೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆ ನೀಡಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಗೆ ಬರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರ ನಿಗದಿಪಡಿಸಿರುವ ಎಲ್ಲ ಸ್ಥಳಗಳಲ್ಲಿ ಜನರು ನಿಗದಿತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಇದನ್ನು ಪಾಲಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲು ಸರ್ಕಾರ ಸೂಚನೆ ನೀಡಿದ್ದು, ಇದರನ್ವಯ ಜಿಲ್ಲೆಯಲ್ಲಿ ಈವರೆಗೆ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಮಾಸ್ಕ್​ ಧರಿಸದೆ ಓಡಾಡುತ್ತಿರುವ ಸಾರ್ವಜನಿಕರು

ಅಕ್ಟೋಬರ್ 23 ರಿಂದ 29 ರವರೆಗೆ ಅಂದರೆ ಏಳು ದಿನಗಳ ಅವಧಿಯಲ್ಲಿಯೇ ನಿಯಮ ಉಲ್ಲಂಘಿಸಿದ 741 ಜನರಿಂದ 1.10 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ದಸರಾ ಹಬ್ಬದ ಅವಧಿಯಲ್ಲಿ ಅಂದರೆ ಅ. 25 ಮತ್ತು 26 ರಂದು ಎರಡು ದಿನಗಳ ಅವಧಿಯಲ್ಲಿ ಒಟ್ಟು 181 ಜನರಿಂದ 29,350 ರೂ. ದಂಡ ಸಂಗ್ರಹಿಸಲಾಗಿದೆ. ಸಾರ್ವಜನಿಕರು ಇನ್ನಾದರೂ ಇಂತಹ ದಂಡ ಪ್ರಕ್ರಿಯೆಗೆ ಅವಕಾಶ ನೀಡದೆ, ಕೋವಿಡ್ ಪಿಡುಗನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮಗಳನ್ನು ತಪ್ಪದೆ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಎಸ್​ಪಿ ಮನವಿ ಮಾಡಿದ್ದಾರೆ.

Last Updated : Oct 29, 2020, 7:22 PM IST

ABOUT THE AUTHOR

...view details