ದಾವಣಗೆರೆ:ಜಿಲ್ಲೆಯ ಹೊನ್ನಾಳಿ ತಾಲೂಕಿನ ಐತಿಹಾಸಿಕ ಪುರಾತನ ಆಂಜನೇಯ ದೇವಾಲಯ ಶಿಥಿಲಾವಸ್ಥೆಗೆ ತಲುಪಿತ್ತು. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಂತ ಗ್ರಾಮಸ್ಥರು ಬರೋಬ್ಬರಿ 6 ಕೋಟಿ ರೂ. ವೆಚ್ಚದಲ್ಲಿ ಹೊಯ್ಸಳರ ಶೈಲಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ದೇವಸ್ಥಾನ ನಿರ್ಮಾಣ ಮಾಡಲು ಕೆಲ ಗ್ರಾಮಗಳಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿದ್ರೆ, ಈ ಕುಳಗಟ್ಟೆ ಗ್ರಾಮದ ಗ್ರಾಮಸ್ಥರು ಮಾತ್ರ ಅವರೇ ದೇಣಿಗೆ ಹಾಕಿಕೊಂಡು ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯ 2017ರಲ್ಲಿ ಶಿಥಿಲಗೊಂಡಿತ್ತು. ಸುಮಾರು ವರ್ಷಗಳ ಹಿಂದೆಯೇ ಆಂಜನೇಯ ಸ್ವಾಮಿಯ ವಿಗ್ರಹ ಮುಕ್ಕಾಗಿತ್ತು. ಬೇರೆ ಮೂರ್ತಿ ಮಾಡಿಸಲು ಗ್ರಾಮಸ್ಥರು ಬೇರೆ ಬೇರೆ ಊರು ಸುತ್ತುತ್ತಿದ್ದರಂತೆ. ಆಗ ಗ್ರಾಮದ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದು ನಿಮ್ಮ ಊರಿನಲ್ಲಿ ನನ್ನ ವಿಗ್ರಹವಿದೆ. ಅದನ್ನೇ ಪ್ರತಿಷ್ಠಾಪಿಸಿ ಎಂದಿತ್ತಂತೆ. ಹಾಗಾಗಿ ದೇವಾಲಯ ಮರು ನಿರ್ಮಾಣ ಮಾಡಬೇಕೆಂದು ರಾಂಪುರದ ವಿಶ್ವೇಶ್ವರ ಹಾಲಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಇಡೀ ಗ್ರಾಮಸ್ಥರು ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು.
6 ಕೋಟಿ ರೂ. ವೆಚ್ಚದಲ್ಲಿ ದೇಗುಲ ನಿರ್ಮಾಣ: ದೇವಾಲಯ ನಿರ್ಮಾಣಕ್ಕೆ ಯಾವುದೇ ಪಕ್ಷದ ರಾಜಕಾರಣಿಗಳ ಬಳಿಗೆ ಅಥವಾ ಬೇರೆಲ್ಲೂ ಹಣಕಾಸಿಗೆ ಕೈಚಾಚದ ಕುಳಗಟ್ಟೆ ಗ್ರಾಮದ ಜನರು ಸ್ವತಃ ತಾವೇ ದೇಣಿಗೆ ಹಾಕಿ ದೇವಾಲಯ ನಿರ್ಮಾಣ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದರು. ಅದರಂತೆ ಗ್ರಾಮಸ್ಥರು ಇಂತಿಷ್ಟು ಅಂತ ಹಣ ಹೊಂದಿಸಿಕೊಂಡು ಬರೋಬ್ಬರಿ 6 ಕೋಟಿ ವೆಚ್ಚದಲ್ಲಿ ಅದ್ಭುತವಾದ ಹೊಯ್ಸಳ ಶೈಲಿಯ ಕಲ್ಲಿನ ದೇವಾಲಯ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದಾರೆ.
ಗ್ರಾಮಸ್ಥ ರಾಮಪ್ಪ ಮಾತನಾಡಿ, "ಈ ದೇವಾಲಯ ನಿರ್ಮಾಣ ಮಾಡಲು ಊರಿನ ಮುಖಂಡರು ಸೇರಿ ಸಂಕಲ್ಪ ಮಾಡಿದೆವು. ಅದರಂತೆ ಗ್ರಾಮಸ್ಥರಿಂದ ಸಂಗ್ರಹಿಸಿದ 6 ಕೋಟಿ ರೂ. ದೇಣಿಗೆಯಲ್ಲಿ ದೇವಾಲಯ ನಿರ್ಮಿಸಲಾಗಿದೆ. ಭಕ್ತರಿಂದ ಒಂದು ನಯಾ ಪೈಸೆ ಕೂಡ ದೇವಾಲಯ ನಿರ್ಮಾಣಕ್ಕೆ ಪಡೆದಿಲ್ಲ" ಎಂದರು.