ದಾವಣಗೆರೆ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹದಿಂದ ಜನ ಕಂಗೆಟ್ಟು ಹೋಗಿದ್ದು, ಎಲ್ಲೆಡೆಯಿಂದಲೂ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿಯೂ ನೆರವಿನಹಸ್ತ ಚಾಚುತ್ತಿರುವ ಜನರು, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಇನ್ನು ತಾಲೂಕಿನ ಹೊಸಕುಂದುವಾಡ ಗ್ರಾಮದ ಯುವಕರು, ಮನೆ ಮನೆಗೆ ತೆರಳಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದರು. ಸಂಘಟನೆಗಳು ಮಾತ್ರವಲ್ಲ, ಪ್ರತಿಯೊಬ್ಬರೂ ಸಹ ಹೋಗಿ ಅಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.
ಪ್ರವಾಹ ಸಂತ್ರಸ್ತರಿಗೆ ನೆರವಿನಹಸ್ತ ಚಾಚಿದ ಗ್ರಾಮಸ್ಥರು ಉತ್ತರ ಕರ್ನಾಟಕದ ಲಕ್ಷಾಂತರ ಮಂದಿ ಭೀಕರ ಪ್ರವಾಹದಿಂದ ನಲುಗಿರುವ ದೃಶ್ಯವನ್ನು ಮಾಧ್ಯಮಗಳಲ್ಲಿ ನೋಡಿದ ಜನರು, ತಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬ ಉದ್ದೇಶದಿಂದ ಎಲ್ಲಾ ಮನೆಗಳಿಗೂ ತೆರಳಿ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ. ಇದಕ್ಕೆ ಗ್ರಾಮದ ಜನರು ಸ್ಪಂದಿಸಿ ಸಹಾಯ ಮಾಡಿದ್ದಾರೆ.
35 ಕ್ವಿಂಟಾಲ್ ಅಕ್ಕಿ, ಒಂದೂವರೆ ಸಾವಿರ ರೊಟ್ಟಿ, ಬಟ್ಟೆ, ಬಿಸ್ಕತ್, ಪೇಸ್ಟ್, ಸೋಪು ಸೇರಿದಂತೆ ದಿನೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿಕೊಟ್ಟಿದ್ದಾರೆ.