ದಾವಣಗೆರೆ :ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಇಂಥ ವಿಷಮ ಪರಿಸ್ಥಿತಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ವೇಳೆಗೆ ವೆಂಟಿಲೇಟರ್ ಸಿಗುತ್ತಿಲ್ಲ. ವೈರಸ್ಗೆ ಹೆಚ್ಚಿನ ಮಂದಿ ಬಲಿ ಆಗುತ್ತಿರುವುದಕ್ಕೆ ಇದೇ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಈ ಆರೋಪ ಅಲ್ಲಗೆಳೆದಿದ್ದು, ವೆಂಟಿಲೇಟರ್ ಸಮಸ್ಯೆ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಉಸಿರಾಟ, ಹೃದಯ ಸಂಬಂಧಿ, ಅಸ್ತಮಾ ಸೇರಿ ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಜಿಲ್ಲಾಸ್ಪತ್ರೆಗೆ ಬಂದಾಗ ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರಕದ ಪರಿಣಾಮ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತದ ಬೇಜವಾಬ್ದಾರಿಯೇ ಕಾರಣ ಎಂಬುದು ರೋಗಿಗಳ ಸಂಬಂಧಿಕರ ಆರೋಪ.
ಬೆಣ್ಣೆ ನಗರಿಯಲ್ಲಿ ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಸಮಸ್ಯೆ.. ವೈದ್ಯರ ಮಾತೇ ಬೇರೆ! ಹಾವೇರಿ, ಚಿತ್ರದುರ್ಗದಿಂದ ಹೆಚ್ಚಿನ ರೋಗಿಗಳು ತುರ್ತು ಚಿಕಿತ್ಸೆಗೆ ಬರುತ್ತಿರುವುದರಿಂದ ಎಲ್ಲರಿಗೂ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕೇವಲ 8 ವೆಂಟಿಲೇಟರ್ಗಳು ಜಿಲ್ಲಾಸ್ಪತ್ರೆಯಲ್ಲಿವೆ. ಬೇರೆ ಬೇರೆ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಕೂಡ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿಯೂ ಇದೇ ಸ್ಥಿತಿ. ದಿನೇದಿನೆ ಕೋವಿಡ್ ಪ್ರಕರಣ ಜಾಸ್ತಿ ಆಗುತ್ತಿರುವ ಕಾರಣದಿಂದ ರೋಗಿಗಳನ್ನು ಸೇರಿಸಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳಂತೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸ್ತಿಲ್ಲ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ವೆಂಟಿಲೇಟರ್ ಖರೀದಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ತಜ್ಞ ವೈದ್ಯರ ಕೊರತೆ?:ವೆಂಟಿಲೇಟರ್‌ನ ರೋಗಿಗೆ ಅಳವಡಿಸುವುದಕ್ಕೆ ತಜ್ಞ ವೈದ್ಯರು ಬೇಕೇಬೇಕು. ಕೇವಲ ಕೊರೊನಾ ರೋಗಿಗಳಿಗಷ್ಟೇ ಅಲ್ಲ, ಡಯಾಲಿಸಿಸ್, ಹೃದಯ ಸಂಬಂಧಿ, ತೀವ್ರ ಉಸಿರಾಟದ ಸಮಸ್ಯೆಯಂತ ಗಂಭೀರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಳವಡಿಸಿದಾಗ ವೈದ್ಯರು ಕ್ಷಣಕ್ಷಣವೂ ಗಮನಿಸುತ್ತಿರಬೇಕು. ಕನಿಷ್ಠ ಮೂರು ಬೆಡ್ಗಳಿಗಾದರೂ ಒಬ್ಬ ತಜ್ಞ ವೈದ್ಯರು ಇರಬೇಕು. ಆದರೆ, ವೈದ್ಯರ ಕೊರತೆಯಿಂದ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ಬೆಣ್ಣೆ ನಗರಿಯಲ್ಲಿ ಕೊರೊನಾ ರೋಗಿಗಳಿಗೆ ವೆಂಟಿಲೇಟರ್ ಸಮಸ್ಯೆ ಗಂಭೀರವಾಗಿರುವ ಎಲ್ಲಾ ರೋಗಿಗಳಿಗೂ ವೆಂಟಿಲೇಟರ್ ಅಳವಡಿಸುವ ಅವಶ್ಯಕತೆ ಇಲ್ಲ. ಅವರಿಗೆ ಮೊದಲು ಆ್ಯಕ್ಸಿಜನ್ ನೀಡಬೇಕು. ಚಿಕಿತ್ಸೆ ಕೊಟ್ಟ ಬಳಿಕ ಅವಶ್ಯಕತೆ ಇದ್ದರೆ ಮಾತ್ರ ವೆಂಟಿಲೇಟರ್ ಅಳವಡಿಸಬೇಕು. ಆದರೆ, ಆಸ್ಪತ್ರೆಗೆ ಬಂದ ತಕ್ಚಣವೇ ವೆಂಟಿಲೇಟರ್ ಹಾಕಿ ಎಂಬುದು ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರ ಬೇಡಿಕೆ ಆಗಿರುತ್ತೆ. ರೋಗ ಹೆಚ್ಚು ಉಲ್ಬಣಗೊಳ್ಳುವವರೆಗೆ ಮನೆಯಲ್ಲಿಯೇ ಇರದೇ ನೋವು ಕಾಣಿಸಿಕೊಂಡಾಕ್ಷಣ ಆಸ್ಪತ್ರೆಗೆ ಬಂದರೆ ಅನಾಹುತ ಸಂಭವಿಸಲ್ಲ. ಶೇ.5ಕ್ಕಿಂತ ಕಡಿಮೆ ರೋಗಿಗಳಿಗಷ್ಟೇ ವೆಂಟಿಲೇಟರ್ ಅವಶ್ಯಕತೆ ಇರುತ್ತೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ "ಈಟಿವಿ ಭಾರತ"ಗೆ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು ಆಸ್ಪತ್ರೆಗಳಲ್ಲಿ 72 ರಿಂದ 78 ವೆಂಟಿಲೇಟರ್ಗಳಿವೆ. ಯಾವುದೇ ಸಮಸ್ಯೆ ಆಗಿಲ್ಲ. ದಾವಣಗೆರೆ ಒಂದರಲ್ಲಿಯೇ ಒಟ್ಟು 32 ಇದ್ದು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 10 ವೆಂಟಿಲೇಟರ್ಗಳಿವೆ. ಹೊಸದಾಗಿ 10 ವೆಂಟಿಲೇಟರ್ಗಳು ಬಂದಿದ್ದು, ಅಳವಡಿಸಬೇಕಾಗಿದೆ. ಕೊರೊನಾ ರೋಗಿಗಳು ಹೆಚ್ಚಾಗಿರುವ ಕಾರಣ ಸ್ವಲ್ಪ ಸಮಸ್ಯೆ ಆಗಿರಬಹುದು ಅಷ್ಟೇ ಎನ್ನುತ್ತಾರೆ ವೈದ್ಯರು.