ದಾವಣಗೆರೆ:ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಇಂದು ಮಂಗಳವಾರ ಜಾತ್ರಾ ಮಹೋತ್ಸವದ ಹಿನ್ನೆಲೆ ಪೂರ್ವಭಾವಿ ಸಭೆ ನಡೆಯಿತು. ಫೆಬ್ರವರಿ 8 ಮತ್ತು 9 ರಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ವಾಲ್ಮೀಕಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಮುದಾಯ ಆಯ್ಕೆ ಮಾಡಿದೆ. ಸಚಿವ ಕೆಎನ್ ರಾಜಣ್ಣ ಮತ್ತು ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಸಮ್ಮುಖದಲ್ಲಿ ಈ ಸಭೆ ಜರುಗಿತು.
ಪೂರ್ವಭಾವಿ ಸಭೆ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, ''ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಇರುವ ವಾಲ್ಮೀಕಿ ಗುರುಪೀಠದಲ್ಲಿ ಎರಡು ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯಾದ್ಯಂತ ಭಕ್ತರು ಬರಲಿದ್ದಾರೆ. ವಾಲ್ಮೀಕಿಯೇ ರಾಮನನ್ನು ಜಗತ್ತಿಗೆ ಪರಿಚಯಿಸಿದ್ದು, ಇದೇ ಜನವರಿ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ರಾಮಾಯಣ ಬರೆಯದೇ ಇದ್ದರೇ ರಾಮನ ಪರಿಚಯವೇ ಆಗುತ್ತಿರಲಿಲ್ಲ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರದ ರೀತಿಯಲ್ಲಿ ವಾಲ್ಮೀಕಿ ಮಂದಿರ ಆಗಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಈ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಮ ಜನ್ಮಭೂಮಿ ಟ್ರಸ್ಟ್ಗೆ ಕಳುಹಿಸಲಾಗುವುದು'' ಎಂದು ಮಾಹಿತಿ ನೀಡಿದರು.
''ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಅವರನ್ನು ಕರೆಯಬೇಕಾ ಅಥವಾ ಬೇಡ್ವಾ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು'' ಎಂದ ಅವರು ತಿಳಿಸಿದರು.
ಕಾಂಗ್ರೆಸ್ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ - ಕೆ ಎನ್ ರಾಜಣ್ಣ: ''ಸಿಎಂ ಅವಕಾಶವನ್ನು ಯಾರಾದರೂ ಬೇಡಾ ಅಂತಾರಾ, ಕಾಂಗ್ರೆಸ್ನಲ್ಲಿ ಸಿಎಂ ಆಗಲು ಸಾಕಷ್ಟು ಜನರಿಗೆ ಆಸೆಯಿದೆ. ಆದರೆ, ನಮ್ಮ ಪಕ್ಷದಲ್ಲಿ ಈಗ ಸಿಎಂ ಸ್ಥಾನ ಖಾಲಿ ಇಲ್ವಲ್ಲ'' ಎಂದು ಸಚಿವ ಕೆ ಎನ್ ರಾಜಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.