ದಾವಣಗೆರೆ: ಈ ಗ್ರಾಮದಲ್ಲಿ ಅಂಬೇಡ್ಕರ್ ಮೂರ್ತಿಗೆ ನೆಲೆ ಇಲ್ಲದಂತಾಗಿದೆ. ದೇಶದ ದೀನ ದಲಿತರಿಗೆ ಸೂರನ್ನು ನೀಡಿದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಜಾಗ ನೀಡಿ ಎಂದು ದಲಿತರು ಸವರ್ಣೀಯರ ಮುಂದೆ ಹೋರಾಟಕ್ಕೆ ಇಳಿಯುವಂತಾಗಿದೆ. ಗ್ರಾಮದ ದಲಿತರು ಕೋರ್ಟ್ ಆದೇಶಕ್ಕೆ ತಲೆಬಾಗಿ ಮೂರ್ತಿಯನ್ನು ಮೊದಲಿದ್ದ ಸ್ಥಳದಿಂದ ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಅದರೆ, ಸ್ಥಳಾಂತರ ಮಾಡಿದ ಸ್ಥಳದಲ್ಲಿಯೂ ಮೂರ್ತಿ ಪ್ರತಿಷ್ಠಾಪಿಸಲು ಸವರ್ಣಿಯರು ಮತ್ತೆ ತಕರಾರು ತೆಗೆದಿದ್ದಾರೆ.
ದಾವಣಗೆರೆ ಹಾಗು ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾಗಿರುವ ಚಿಕ್ಕಮೆಗಳಗೇರಿ ಗ್ರಾಮದಲ್ಲಿ ಬಾಬಾ ಸಾಹೇಬರಿಗೆ ನೆಲೆ ಇಲ್ಲದಂತಾಗಿದೆ. ಇದೇ ಗ್ರಾಮದ ದಲಿತರೆಲ್ಲಾ ಸೇರಿ 2018ರಲ್ಲಿ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ದೇವಸ್ಥಾನವಿದೆ, ಕರಿಕಲ್ಲು ಇದೆ. ಇಂತಹ ಸ್ಥಳದಲ್ಲಿ ಅಂಬೇಡ್ಕರ್ ಮೂರ್ತಿ ಇರುವುದು ಬೇಡ ಎಂದು ಗ್ರಾಮದ ಕೆಲವರು ತಕರಾರು ತೆಗೆದಿದ್ದರು. ಇದೇ ವಿಚಾರಕ್ಕಾಗಿ ಹೋರಾಟವಾಗಿ ಕೊನೆಗೂ ಹೈಕೋರ್ಟ್ ಮೆಟ್ಟಿಲೇರಿತ್ತು.