ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಾವಣಗೆರೆ: ನಾವು ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದ ಶಾಸಕರೇ ತಪ್ಪು ಮಾಡಿರೋದು, ನಾವು ಮನಸ್ಸು ಮಾಡಿದ್ದರೆ ಪ್ರಕರಣ ಮುಚ್ಚಿ ಹಾಕಬಹುದಿತ್ತು. ಆದರೆ ನಾವು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಂಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ದಾವಣಗೆರೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಗಳು ನಡೆದಿವೆ. ಆದರೆ ಅವರು ಭ್ರಷ್ಟಾಚಾರ ಹೊರ ಬರಬಾರದು ಎಂದು ಲೋಕಾಯುಕ್ತಕ್ಕೆ ಬೀಗ ಹಾಕಿದ್ದರು. ಲೋಕಾಯುಕ್ತದ ಪರ ತೀರ್ಪು ಬಂದಾಗ, ಕಾಂಗ್ರೆಸ್ ನವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿಗೆ ಹೋಗಿ ಅಂದಿದ್ದರು. ಆದರೆ ನಾವು ಸ್ಪಷ್ಟ ತೀರ್ಮಾನ ತೆಗೆದುಕೊಂಡೆವು. ಬಲವಾದ ಲೋಕಾಯುಕ್ತ ಬೇಕು ಎಂದು ಲೋಕಾಯುಕ್ತಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ ಎಂದರು.
ಅಗತ್ಯವಿದ್ದರೆ ಹೆಚ್ಚಿನ ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇವೆ:ಯಾರೇ ತಪ್ಪು ಮಾಡಿದರು ಅವರ ಮೇಲೆ ಕ್ರಮ ಜರುಗಿಸಬೇಕೆಂಬ ನಿಲುವನ್ನು ಬಿಜೆಪಿ ಸರ್ಕಾರ ತೆಗೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಈ ಪ್ರಕರಣವನ್ನು ಹೊರಗೆ ಬರದಂತೆ ಮಾಡಬಹುದಿತ್ತು. ಆದರೆ ನಾವು ಆ ರೀತಿ ಮಾಡಲಿಲ್ಲ, ಯಾರು ಭ್ರಷ್ಟಾಚಾರ ಮಾಡುತ್ತಾರೋ ಅಂತವರಿಗೆ ಇದು ಪಾಠ ಆಗಬೇಕು, ಅವರ ವಿರುದ್ಧ ಕಾನೂನು ಕ್ರಮ ಆಗಬೇಕು, ಅವರಿಗೆ ಕೆಎಸ್ಡಿಎಲ್ಗೆ ರಾಜೀನಾಮೆ ನೀಡುವಂತೆ ಪಕ್ಷದಿಂದ ಸೂಚಿಸಲಾಗಿತ್ತು. ಅದರಂತೆ ರಾಜೀನಾಮೆ ಕೊಟ್ಟಿದ್ದಾರೆ, ಮುಂದೆ ಅಗತ್ಯವಿದ್ದರೆ ಹೆಚ್ಚಿನ ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ಯಾವುದೇ ಕಾರಣಕ್ಕೂ ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯಿಲ್ಲ, ಕಾಂಗ್ರೆಸ್ ಪಕ್ಷದವರು ತಮ್ಮ ಕಾಲದಲ್ಲಿ 59 ಈ ರೀತಿಯ ಪ್ರಕರಣಗಳನ್ನು ಮುಚ್ಚಿ ಹಾಕಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಶುರು ಆಗಿತ್ತು. ನೆಹರು ಅವರ ಜೀಪ್ ಹಗರಣದಿಂದ ಕಾಮನ್ ವೆಲ್ತ್, 2ಜಿ ವರೆಗೂ ಲಕ್ಷ ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿತ್ತು. ಇವರ ಕಾಲದಲ್ಲಿ ಭ್ರಷ್ಟಾಚಾರ ಎಂಬ ಪದ ಸಣ್ಣದಾಗಿತ್ತು, ಹಗರಣ ಎಂದು ಬರುವುದಕ್ಕೆ ಶುರುವಾಗಿತ್ತು. ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷವಾಗಿರಲಿ, ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ವಿರೂಪಾಕ್ಷಪ್ಪ ಮಾಡಾಳ್ ಮನೆ ಮೇಲೆ ಲೋಕಾಯುಕ್ತ ದಾಳಿಗೆ ನಾನು ಕಾರಣನಲ್ಲ:ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಮನೆ ಮೇಲೆ ಲೋಕಾಯುಕ್ತ ದಾಳಿಗೆ ನಾನು ಕಾರಣನಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಸ್ಪಷ್ಟಪಡಿಸಿದ್ದಾರೆ. ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಮನೆ ಮೇಲೆ ಸಂಸದ ಜಿಎಂ ಸಿದ್ದೇಶ್ವರ್ ನವರೇ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಇದರ ಹಿಂದೆ ಶಾಮನೂರು ಶಿವಶಂಕರಪ್ಪ ನವರ ಕೈವಾಡ ಇರ್ಬೇಕು, ನನ್ನ ಪಕ್ಷದ ಶಾಸಕನಿಗೆ ನಾನು ದಾಳಿ ಮಾಡಿಸಲಾಗುವುದಿಲ್ಲ, ಇನ್ನು ಕೈವಾಡ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಹಿಂದೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೊತೆ ನಾನು ಜಗಳವಾಡಿದ್ದೆ. ಅದೇ ರೀತಿ ಸಿಎಂ ಜೊತೆ ಕೂಡಾ ಜಗಳವಾಡಿದ್ದೇನೆ. ನಾವು ಮತ್ತೆ ಒಂದಾಗುತ್ತೇವೆ, ಹಾಗಂತ ಲೋಕಾಯುಕ್ತದಿಂದ ದಾಳಿ ಮಾಡಿಸಕಾಗುತ್ತಾ? ನಾನು ಯಾವುದೇ ಕಾರಣಕ್ಕೂ ಶಾಸಕ ಮಾಡಾಳ್ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಿಸಿಲ್ಲ. ನನ್ನ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆರೋಪ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ವಯಸ್ಸಾಗಿದ್ದರಿಂದ ಬುದ್ಧಿ ಭ್ರಮಣೆ ಆಗಿದೆ. ಇನ್ನು, ಶಾಸಕ ವಿರೂಪಾಕ್ಷಪ್ಪ ಮಾಡಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಇದನ್ನೂ ಓದಿ:ಲೋಕಾಯುಕ್ತ ದಾಳಿ: ಅಪ್ಪ, ಮಗನ ಕೋಟಿ ಕೋಟಿ ಹಣದ ತನಿಖೆ ಚುರುಕು