ಕರ್ನಾಟಕ

karnataka

ETV Bharat / state

ಬೆಣ್ಣೆನಗರಿ ಸ್ಮಾರ್ಟ್ ಆದರೂ ಸ್ಮಾರ್ಟ್ ಆಗದ ಅಂಡರ್​ಪಾಸ್: ರೋಸಿಹೋದ ಸಾರ್ವಜನಿಕರು - Davanagere Underpass problem news 2021

ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಇರುವ ಅಂಡರ್​ಪಾಸ್​ ಅಭಿವೃದ್ಧಿಯಾಗದೆ ಹಾಗೆಯೇ ಉಳಿದುಕೊಂಡಿದ್ದು, ಮಳೆಗಾಲದಲ್ಲಿ ನಾನಾ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ.

underpass-problem-in-davanagere
ಬೆಣ್ಣೆನಗರಿ ಸ್ಮಾರ್ಟ್ ಆದ್ರು, ಸ್ಮಾರ್ಟ್ ಆಗದ ಅಂಡರ್​ಪಾಸ್

By

Published : Apr 15, 2021, 7:44 PM IST

ದಾವಣಗೆರೆ: ಬೆಣ್ಣೆ ನಗರಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಇರುವ ಅಂಡರ್ ಪಾಸ್ ಮಾತ್ರ ಅಭಿವೃದ್ಧಿಯಾಗದೆ ಉಳಿದುಕೊಂಡಿದೆ. ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಪುರಾತನ ಪ್ರಮುಖ ಅಂಡರ್​ಪಾಸ್​ ಇದಾಗಿದ್ದು, ಮಳೆ ಬಂದ್ರೆ ಸಾಕು ಇಲ್ಲಿ ನೀರು ತುಂಬಿಕೊಂಡು ಜನ ಕಿರಿಕಿರಿ ಅನುಭವಿಸುತ್ತಾರೆ.

ದಾವಣಗೆರೆ ಮಹಾನಗರ ಪಾಲಿಕೆಯಾಗಿ, ಸ್ಮಾರ್ಟ್ ಸಿಟಿಯಾಗಿ ಹಲವು ವರ್ಷಗಳೇ ಉರುಳಿದರು ಕೂಡ ಪುರಾತನ ಅಂಡರ್​​ಪಾಸ್​ಗಳು ಮಾತ್ರ‌ ಅಭಿವೃದ್ಧಿ ಕಾಣದೆ ಹೇಗಿವೆಯೋ ಹಾಗೆಯೇ ಉಳಿದುಕೊಂಡಿವೆ. ರೈಲ್ವೆ ನಿಲ್ದಾಣ ಪಕ್ಕದಲ್ಲಿ ಇರುವ ಹಳೇ ದಾವಣಗೆರೆಯ ಕೆ.ಆರ್ ಮಾರುಕಟ್ಟೆ, ಇಸ್ಲಾಂ ಪೇಟೆ, ದುಗ್ಗಮನ ಪೇಟೆ, ಗಾಂಧಿನಗರ, ಆಜಾದ್ ನಗರ, ಬಾಷ ನಗರ, ಅಹ್ಮದ್ ನಗರಕ್ಕೆ ಸಂಪರ್ಕ‌ ಕಲ್ಪಿಸುವ ಅಂಡರ್ ಪಾಸ್​ಗೆ ಪಾಲಿಕೆ ಮೇಜರ್ ಸರ್ಜರಿ ಮಾಡಬೇಕಿದೆ.

ಮೇಯರ್​ ಎಸ್.ಟಿ.ವೀರೇಶ್

ಮಳೆ ಬಂದರೆ ಸಾಕು ಈ ಅಂಡರ್ ಪಾಸ್​ನಲ್ಲಿ ಭಾರೀ ನೀರು ಶೇಖರಣೆಯಾಗುತ್ತಿದೆ. ಇದರಿಂದಾಗಿ ಸಾಕಷ್ಟು ಜನ ಬಿದ್ದು ಅನಾಹುತ ಮಾಡಿಕೊಂಡಿದ್ದಾರೆ. ಇನ್ನು ಈ ಅಂಡರ್ ಪಾಸ್ ಮೂಲಕವೇ ಹಳೇ ದಾವಣಗೆರೆಗೆ ಹಾದು ಹೋಗಬೇಕಾಗಿದೆ. ಇಲ್ಲಿಯವರೆಗೆ ಹಲವು ಮೇಯರ್​ಗಳು ಬದಲಾದರು ಕೂಡ ಅಂಡರ್ ಪಾಸ್ ಮಾತ್ರ ಅಭಿವೃದ್ಧಿ ಕಾಣದೆ ಹಾಗೇ ಉಳಿದಿದೆ.

ಸದಾ ನೀರಿನಿಂದ ತುಂಬಿಕೊಳ್ಳುವ ಅಂಡರ್​ಪಾಸ್​ಗೆ ಮೇಜರ್ ಸರ್ಜರಿ ಮಾಡಲು ಪ್ರಯತ್ನಿಸಿದರೂ ಕೂಡ ರೈಲ್ವೆ ಇಲಾಖೆ ಅಡ್ಡಗಾಲು ಹಾಕುತ್ತಿತ್ತು ಎಂಬ ಆರೋಪ ಇತ್ತು. ಆದ್ದರಿಂದ‌ ಇಂದು ಮೇಯರ್ ಎಸ್.ಟಿ.ವೀರೇಶ್, ಪೌರಾಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿ ರೈಲ್ವೆ ಇಂಜಿನಿಯರ್​ಗಳನ್ನು ಕರೆಸಿ ಸ್ಥಳ‌ಪರಿಶೀಲನೆ‌ ಮಾಡಿದರು. ಅಂಡರ್ ಪಾಸ್‌ನಲ್ಲಿ ಶೇಖರಣೆಯಾಗುವ ನೀರು ಎತ್ತಲು ಪಂಪ್ ಅಳವಡಿಸಲು ಚಿಂತಿಸಲಾಗಿದೆ. ಈಗಿರುವ ಅಂಡರ್ ಡ್ರೈನೇಜ್ ಮಣ್ಣಿನಿಂದ ತುಂಬಿಕೊಂಡಿದ್ದು, ಅದನ್ನು ತೆಗೆಸಿ ಸುಗಮವಾಗಿ ನೀರು ಹೋಗುವಂತೆ ಮಾಡ್ತೀವಿ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಓದಿ:ಬಳ್ಳಾರಿ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಿದ ಗಾಲಿ ಸೋಮಶೇಖರ ರೆಡ್ಡಿ ಪುತ್ರ

ABOUT THE AUTHOR

...view details