ದಾವಣಗೆರೆ:ಬಿ ಎಸ್ ಯಡಿಯೂರಪ್ಪ ಅವರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಶ್ರೇಷ್ಠ ನಾಯಕ ಎಂದು ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು. 24ನೇ ವೀರಶೈವ ಲಿಂಗಾಯತ ಮಹಾ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಉಜ್ಜಯಿನಿ ಪೀಠದ ಶಿವಾಚಾರ್ಯ ಶ್ರೀ ಮಾತನಾಡಿದರು. ಈ ವೇಳೆ, ವೃತ್ತಿಯಿಂದ ಸಾಮಾನ್ಯವಾಗಿ ಎಲ್ಲರೂ ನಿವೃತ್ತರಾಗುತ್ತಾರೆ. ಆದರೆ, ಬಿಎಸ್ ಯಡಿಯೂರಪ್ಪ ಅವರು ನಿವೃತ್ತರಾಗಿಸಲಾಗಿದೆ. ಬಿಎಸ್ವೈ ಪದವಿಗಳಿಂದ ನಿವೃತ್ತರಾಗಿದ್ದಾರೆಯೇ ಹೊರತು ಪ್ರವೃತ್ತಿಗಳಿಂದ ಅಲ್ಲ ಎಂದರು. ಮುಂದೇ ಕೂಡ ಸಮಾಜವನ್ನು ಕಟ್ಟುವಂತಹ, ಎಲ್ಲರಿಗೂ ನಾಯಕನಾಗುವಂತಹ, ಮುಂದಿನ ನಾಯಕರನ್ನು ಬೆಳೆಸುವಂತ ಶಕ್ತಿಯನ್ನು ಭಗವಂತ ಯಡಿಯೂರಪ್ಪ ಅವರಿಗೆ ನೀಡಲಿ ಎಂದು ಇದೇ ವೇಳೆ ಶ್ರೀಗಳು ಆಶಿಸಿದರು.
ಸರ್ಕಾರ ಜಾತಿ ಗಣತಿಗೂ ಮುನ್ನ ಅಖಿಲ ಭಾರತ ವೀರಶೈವ ಮಹಾಸಭಾ ಜಾತಿ ಗಣತಿ ಮಾಡಬೇಕು. ವೀರಶೈವ ಒಳಪಂಗಡಗಳು ಎಲ್ಲವನ್ನು ಮರೆತು ಒಗ್ಗೂಡಬೇಕಾಗಿದೆ. ಜಾತಿಗಣತಿ ಕಾಲಂನಲ್ಲಿ ಉಪಜಾತಿಗಳಿದ್ದರೂ, ಅದನ್ನು ಬಿಟ್ಟು ವೀರಶೈವ ಲಿಂಗಾಯತ ಎಂದು ನಾವೆಲ್ಲ ನಮೂದಿಸಬೇಕಾಗಿದೆ. ಸರ್ಕಾರ ಜಾತಿ ಗಣತಿ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಹಾಸಭಾದಿಂದಲೇ ಜಾತಿ ಗಣತಿ ಮಾಡಿ ಅಂಕಿ - ಅಂಶಗಳನ್ನು ಶೇಖರಿಸಿ ಇಟ್ಟುಕೊಳ್ಳಿ ಎಂದು ಶಾಮನೂರು ಶಿವಶಂಕರಪ್ಪ ಅವರಿಗೆ ಹೇಳಿದ್ದೆ ಎಂದು ತಿಳಿಸಿದರು.