ದಾವಣಗೆರೆ:ಸ್ನಾನ ಮಾಡಲೆಂದು ನದಿಗಿಳಿದ ಸಹೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಬಳಿ ಹರಿಯುವ ತುಂಗಾಭದ್ರಾ ನದಿಯಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ಮುಳುಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಅವರ ಪುತ್ರಿಯರಾದ ಚೈತ್ರಾ(19), ಪುಷ್ಪಾ(17) ಮೃತರು. ಭಾನುವಾರ ಕುಟುಂಬಸಮೇತ ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿಗೆ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ನೋಡು ನೋಡುತ್ತಿದ್ದಂತೆಯೇ ಸಹೋದರಿಯರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗುತ್ತಿದ್ದಾಗ ಕುಟುಂಬದ ಸದಸ್ಯರು ಸಹಾಯಕ್ಕೆ ಧಾವಿಸಿದ್ದಾರೆ. ಆದ್ರೆ ಪ್ರಯತ್ನ ಫಲ ನೀಡಲಿಲ್ಲ.