ದಾವಣಗೆರೆ: ಈಜಲು ತೆರಳಿದ್ದ ಬಾಲಕರಿಬ್ಬರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನವೀಕರಣಗೊಂಡು ಲೋಕಾರ್ಪಣೆಯಾಗಿದ್ದ ಈಜುಕೊಳ ಇದೀಗ ಇಬ್ಬರನ್ನು ಬಲಿ ಪಡೆದಿದೆ. ಮೃತರು ದಾವಣಗೆರೆ ನಗರದ ಬೀಡಿ ಲೇಔಟ್ನ ನಿವಾಸಿಗಳೆಂದು ತಿಳಿದು ಬಂದಿದೆ.
ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಲಿನಿಂದ ರೋಸಿ ಹೋಗಿದ್ದ ಬಾಲಕರು ಈಜುಕೊಳಕ್ಕಾಗಮಿಸಿದ್ದರು. ಮೇಲಿಂದ ನೀರಿಗೆ ಧುಮುಕಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರಿಗೆ ಈಜು ಬಾರದ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯಬಾರದೆಂದು ಈಜುಕೊಳಕ್ಕೆ ಮಾರ್ಗದರ್ಶಕರನ್ನು ನಿಯೋಜನೆ ಮಾಡಲಾಗುತ್ತದೆ. ಅದ್ರೆ, ಇಲ್ಲಿ ಯಾವ ಮಾರ್ಗದರ್ಶಕರು ಹಾಗೂ ತರಬೇತಿದಾರರು ಇಲ್ಲದಿರುವುರಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯಕ್ಕೆ ಮೃತ ದೇಹಗಳನ್ನು ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :ಗಂಡಕ್ ನದಿಯಲ್ಲಿ ಈಜಲು ಹೋದ ಐವರು ಹುಡುಗರು ನೀರು ಪಾಲು..!
ಬಿರು ಬೇಸಿಗೆಯಿಂದ ಕಂಗೆಟ್ಟ ದಾವಣಗೆರೆಯ ಜನರಿಗೆ ಈ ಈಜುಕೊಳ ವರದಾನವಾಗಿತ್ತು. ಆದರೆ, ಕೆಲವು ತಿಂಗಳ ಕಾಲ ಕಾರಣಾಂತರಗಳಿಂದ ಬಂದ್ ಮಾಡಲಾಗಿತ್ತು. ಪುನಃ ನವೀಕರಿಸುವ ಮೂಲಕ ಕಳೆದ ಮಾರ್ಚ್ ತಿಂಗಳಲ್ಲಿ ಸಂಸದ ಸಿದ್ದೇಶ್ವರ್ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪಾಲಿಕೆಯ ಅಧಿಕಾರಿಗಳು ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಇದೀಗ ಪಾಲಿಕೆಯ ಅಧಿಕಾರಿಗಳು ಮಾರ್ಗದರ್ಶಕರು ಮತ್ತು ತರಬೇತುದಾರರನ್ನು ನೇಮಕ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.