ದಾವಣಗೆರೆ: ವರಮಹಾಲಕ್ಷ್ಮಿ ಪೂಜೆ ಅಂಗವಾಗಿ ದೇವರಿಗೆ ಹಾಕಿದ್ದ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಗರದ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ.
ವರಮಹಾಲಕ್ಷ್ಮಿ ಹಬ್ಬದಂದು ದೇವರಿಗೆ ಹಾಕಿದ್ದ ಚಿನ್ನಾಭರಣ ಎಗರಿಸಿದ ಕಳ್ಳರು - ದೇವರಿಗೆ ಹಾಕಿದ್ದ ಆಭರಣಗಳನ್ನು ಕಳ್ಳರು ಕದ್ದು ಪರಾರಿ
ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿಯ ಮನೆಯೊಂದರಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ದೇವರಿಗೆ ಸಂಭ್ರಮದಿಂದ ತೊಡಿಸಿದ್ದ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ನಗರದ ಬೇತೂರು ರಸ್ತೆಯ ಕಲ್ಲೇಶ್ವರ ಮೆಡಿಕಲ್ ಶಾಪ್ ಮಾಲೀಕ ಪ್ರಸನ್ನ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಡೈನಿಂಗ್ ಹಾಲ್‌ನಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸಿ, ರಾತ್ರಿ 11.30ಕ್ಕೆ ಮನೆಯ ಸದಸ್ಯರು ಮಲಗಿದ್ದ ವೇಳೆ ಕಳ್ಳತನ ಮಾಡಲಾಗಿದೆ. ಡೈನಿಂಗ್ ಹಾಲ್‌ನಲ್ಲಿ ಟೇಬಲ್ ಹಿಂಭಾಗದ ಕಿಟಕಿ ತೆಗೆದ ಕಳ್ಳರು, ದೇವರ ಮೂರ್ತಿಗೆ ಧರಿಸಿದ್ದ 40 ಗ್ರಾಂ ತೂಕದ 1.20 ಲಕ್ಷ ರೂ. ಮೌಲ್ಯದ ಬಂಗಾರದ ಚೈನ್, 2.40 ಲಕ್ಷ ರೂ. ಮೌಲ್ಯದ ನಾಲ್ಕು ಬಂಗಾರದ ಬಳೆಗಳು ಹಾಗೂ 31 ಸಾವಿರ ಹಣ ಕದ್ದೊಯ್ದಿದ್ದಾರೆ.
ಹಬ್ಬಕ್ಕೆಂದು ದೇವರಿಗೆ ಸಂಭ್ರಮದಿಂದ ತೊಡಿಸಿದ್ದ ಆಭರಣಗಳು ಇದೀಗ ಕಳ್ಳರ ಪಾಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.