ದಾವಣಗೆರೆ: ಬಿಜೆಪಿ ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ನಲವತ್ತು ಲಕ್ಷ ಹಣ ಸಿಕ್ಕಿರೋದು ಯಾವುದು ಅಂತ ನನಗೆ ಸ್ಪಷ್ವವಾದ ಮಾಹಿತಿ ಇಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಮನೆಯಲ್ಲೇ ಇದ್ದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘‘ಪುತ್ರನ ಮೇಲೆ ಲೋಕಾಯುಕ್ತ ದಾಳಿ ಆಗಿರುವ ಆರೋಪ ನಿರಾಧಾರ, ಅದು ಸತ್ಯಕ್ಕೆ ದೂರವಾದ ವಿಚಾರವಾಗಿದೆ, ಲೋಕಾಯುಕ್ತಕ್ಕೆ ನಲವತ್ತು ಲಕ್ಷ ಹಣ ಸಿಕ್ಕಿರುವುದು ಯಾವ ಹಣ ಎಂಬುದು ಮಾಹಿತಿ ಇಲ್ಲ, ಮೊಬೈಲ್ ಸ್ವೀಚ್ಡ್ ಆಫ್ ಮಾಡಿಕೊಂಡು ಚನ್ನೇಶಪುರ ಮನೆಲ್ಲೆ ಇದ್ದೆ, ಎಲ್ಲೂ ಹೋಗಿಲ್ಲ. ಲೋಕಾಯುಕ್ತ ಸಂಸ್ಥೆಯ ಬಗ್ಗೆ ಅಪಾರ ಗೌರವವಿದೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವಂತ ಕೆಲಸ ಮಾಡುತ್ತಿದೆ ಅದಕ್ಕೆ ಗೌರವ ಕೋಡಬೇಕಾದದ್ದು ನಮ್ಮ ಧರ್ಮ, ಅವರ ಕೇಳುವ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದರು.
ಪಕ್ಷದ ಶಿಸ್ತಿನ ಸಿಪಾಯಿ ನಾನು:ಪಕ್ಷ ನನ್ನನ್ನು ಉಚ್ಛಾಟನೆ ಮಾಡಿಲ್ಲ, ಪಕ್ಷದ ಶಿಸ್ತಿನ ಸಿಪಾಯಿ ನಾನು, ಬಿಜೆಪಿ ಪಕ್ಷದ ಎರಡು ಶಾಸಕನಾಗಲು ಅವಕಾಶ ಮಾಡಿಕೊಟ್ಟಿದೆ. ನನ್ನಿಂದಾಗಿ ಪಕ್ಷಕ್ಕೆ ಮುಜುಗರ ಆಗಬಾರದೆಂದು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನಾನು ಸಜ್ಜನ ರಾಜಕಾರಣಿ ಉಚ್ಛಾಟನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.