ದಾವಣಗೆರೆ :ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಬಿಜೆಪಿಯವರಿಗೆ ರಾಜ್ಯಾಧ್ಯಕ್ಷರ ನೇಮಕ ಮಾಡಲು ಆಗಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ವಿಧಾನಪರಿಷತ್, ವಿಧಾನಸಭೆಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲ. 4 ವರ್ಷ ಆಡಳಿತ ಮಾಡಿದರೂ ಪೂರ್ಣ ಪ್ರಮಾಣದ ಕ್ಯಾಬಿನೆಟ್ ಮಾಡಿಲ್ಲ. ಅವರೆಲ್ಲ ಇಂತಹ ವಿಚಾರಗಳನ್ನ ಹೇಳ್ತಾ ಓಡಾಡ್ತಾರೆ. ಆದರೆ ಸಿಎಂ ಬದಲಾವಣೆ ವಿಚಾರ ಪರೋಕ್ಷವಾಗಿ ವಿರೋಧ ಪಕ್ಷದ ಸೃಷ್ಟಿ ಎಂದು ಬಿಜೆಪಿಯತ್ತ ಬೊಟ್ಟು ಮಾಡಿದರು. ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಉತ್ತರ ನೀಡದೇ ತೆರಳಿದರು.
ಬರ ಪರಿಹಾರಕ್ಕೆ ಕೇಂದ್ರದ ಮೊರೆ :ಇನ್ನು ಬರ ಪರಿಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ 216 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಕೇಂದ್ರಕ್ಕೆ ಆದಷ್ಟು ಬೇಗ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದೇವೆ. ಕೇಂದ್ರ ಸರ್ಕಾರದ ಸಚಿವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಆದಷ್ಟು ಬೇಗ ಕೇಂದ್ರ ಸರ್ಕಾರದ ಬರ ಪರಿಹಾರ ಹಣ ಬಿಡುಗಡೆ ಮಾಡಲಿ. ನಾವು ಕೂಡ ಕೇಂದ್ರದ ಮೇಲೆ ಅವಲಂಬಿತವಾಗಿ ಕೂತಿಲ್ಲ. ಆದಷ್ಟು ಬರವನ್ನ ನಿರ್ವಹಣೆ ಮಾಡುವಂತಹ ಕೆಲಸ ಮಾಡುತ್ತೇವೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದರು.