ದಾವಣಗೆರೆ: ಉಪ ಚುನಾವಣೆ ಫಲಿತಾಂಶ ಇಂದು ಹೊರ ಬಿದ್ದಿದ್ದು, ಮತದಾರರ ತೀರ್ಪನ್ನು ಪ್ರತಿಪಕ್ಷಗಳು ಒಪ್ಪಿಕೊಳ್ಳಲೇಬೇಕಿದೆ. ಮೂರೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ನೇತೃತ್ವದಲ್ಲಿ ಸ್ಥಿರ ಸರ್ಕಾರ ಇರಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ಹೊನ್ನಾಳಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು.
ಡಿಸೆಂಬರ್ 9ನೇ ತಾರೀಖಿನಂದು ಸಿಹಿ ಸುದ್ದಿ ಕೊಡುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಅನರ್ಹರು ಮನೆಗೆ ಹೋಗುತ್ತಾರೆ ಎಂದಿದ್ದರು. ಮತದಾರರು ಯಾರನ್ನು ಮನೆಗೆ ಕಳುಹಿಸಿದ್ದಾರೆ ಎಂಬುದು ಫಲಿತಾಂಶ ನೋಡಿದರೆ ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಪಕ್ಷ ಈಗ ಅಡ್ರೆಸ್ ಇಲ್ಲದಂತಾಗಿದೆ. ಡಿ.ಕೆ.ಶಿವಕುಮಾರ್ ವೀರಾವೇಶದ ಮಾತನಾಡಿದ್ದರು. ಸಿದ್ದರಾಮಯ್ಯರನ್ನು ಪ್ರತಿಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸುವುದೇ ಖರ್ಗೆ ಅವರು ಕೊಡುವ ಸಿಹಿ ಸುದ್ದಿ ಎಂದು ವ್ಯಂಗ್ಯವಾಡಿದರು.