ದಾವಣಗೆರೆ:''ಗ್ಯಾರಂಟಿಗಳಲ್ಲಿ ಕೆಲವೊಂದು ನ್ಯೂನತೆಗಳಿವೆ. ಅವುಗಳ ಕುರಿತು ಚರ್ಚೆ ಮಾಡ್ಬೇಕಾಗಿದೆ. ಎಲ್ಲವನ್ನೂ ಒಂದೇ ಅವಧಿಯಲ್ಲಿ ಕೊಡಿ ಎಂದರೆ ಹೇಗೆ'' ಎಂದು ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದರು.
ನಗರದಲ್ಲಿರುವ ನಿವಾಸದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡಿದ ಅವರು, ''ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಎಲ್ಲವನ್ನೂ ಒಂದೇ ಸಲ ಜಾರಿ ಮಾಡಲು ಆಗುವುದಿಲ್ಲ. ಗ್ಯಾರಂಟಿಯಲ್ಲಿ ಪಾಸಿಟಿವ್, ನೆಗೆಟಿವ್ ಎಲ್ಲವೂ ಇದೆ'' ಎಂದರು.
''ಡಿಗ್ರಿ ಪಾಸ್ ಆದವರಿಗೆ 3,000 ರೂ. ಹಾಗೂ ಡಿಪ್ಲೋಮಾ ಉತ್ತೀರ್ಣರಾದವರಿಗೆ 1,500 ರೂ. ಕೊಡ್ತೀವಿ ಅಂದಿದ್ದೇವೆ. ಡಿಗ್ರಿ ಮುಗಿಸಿ ಮೂರು ತಿಂಗಳಲ್ಲಿ ಕೆಲಸ ಸಿಕ್ರೆ ನಮಗೆ ಹೇಗೆ ಗೊತ್ತಾಗುತ್ತೆ?. ಎರಡೆರಡು ಕಡೆಗಳಲ್ಲಿ ಹಣ ಜಮೆ ಆಗಬಾರದಲ್ಲ. ಹೀಗೆ ಒಂದಷ್ಟು ಸಮಸ್ಯೆಗಳಿವೆ. ಅದಕ್ಕೆ ಒಂದಷ್ಟು ಮರ್ಗಸೂಚಿ ಮಾಡ್ತಿದ್ದೇವೆ" ಎಂದು ತಿಳಿಸಿದರು. 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಕ್ಲಿಯರ್ ಕಟ್ ಆಗಿ ಹೇಳಿದ್ದೇವೆ. 12 ತಿಂಗಳ ಸರಾಸರಿ ಮೇಲೆ ಶೇ 10ರಷ್ಟು ಹೆಚ್ಚಿಗೆ ಕೊಡ್ತೀವಿ ಅಂತ ಹೇಳಿದ್ದೇವೆ ಎಂದ ಅವರು, ಕಾಂಗ್ರೆಸ್ ವಚನ ಭ್ರಷ್ಟ ಅಲ್ಲ'' ಎಂದರು.
''ಗ್ಯಾರಂಟಿಗಳನ್ನು ಜಾರಿಗೆ ಷರತ್ತುಗಳು ಅನ್ವಯಿಸುತ್ತದೆ. ಷರತ್ತುಗಳು ಜಾರಿ ಮಾಡದೇ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗೋದಿಲ್ಲ. ಬಿಜೆಪಿಯವರು ಖಾತೆಗೆ ಹದಿನೈದು ಲಕ್ಷ ರೂ ಹಾಕುತ್ತೇವೆ ಎಂದಿದ್ದರು. ಆ ಹಣ ಖಾತೆಗೆ ಜಮಾ ಆಗಿದೆಯಾ'' ಎಂದು ಟಾಂಗ್ ನೀಡಿದರು.
ಮಾಯಕೊಂಡ ನೂತನ ತಾಲೂಕಿಗೆ ಪ್ರಯತ್ನ- ಶಾಸಕ:''ಮಾಯಕೊಂಡವನ್ನು ನೂತನ ತಾಲೂಕು ಮಾಡ್ಬೇಕೆಂಬ ಕನಸು ಹಲವು ವರ್ಷಗಳಿಂದ ಇದೆ. ಇದಕ್ಕೆ ಸಾವಿರಾರು ಜನ ಮುಖಂಡರು ಹೋರಾಟ ಮಾಡಿದ್ದಾರೆ. ಸರ್ಕಾರಕ್ಕೆ ಹಲವು ವರದಿಗಳನ್ನು ನೀಡಲಾಗಿದೆ. ಆದ್ರೆ ಮಾಯಕೊಂಡವನ್ನು ನೂತನ ತಾಲೂಕು ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'' ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವರಾಜ್ ಹೇಳಿದರು. ದಾವಣಗೆರೆಯಲ್ಲಿ ಅವರು ಮಾತನಾಡಿದರು.
ಡಿಸೆಂಬರ್‌ತನಕ ಸರ್ಕಾರ ಇರುತ್ತೆ, ಸಿಎಂ ಗಾದಿಗಾಗಿ ಕಿತ್ತಾಟ ಆಗುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ''ಇದರ ಬಗ್ಗೆ ನಿರ್ಧಾರ ಮಾಡಲು ನಮ್ಮ ಹೈಕಮಾಂಡ್ ಇದೆ. ಡಿಕೆಶಿ ಸಿಎಂ ಆಗುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ" ಎಂದರು. ಗ್ಯಾರಂಟಿಗಳನ್ನು ಕೊಡಲು ಕೆಲವು ನಿಬಂಧನೆಗಳು ಅನ್ವಯ ಆಗುವುದು ಸಹಜ. ನಿಬಂಧನೆಗಳನ್ನು ವಿಧಿಸದೇ ಯಾವುದೇ ಯೋಜನೆಗಳು ಜಾರಿ ಮಾಡಲು ಬರುವುದಿಲ್ಲ'' ಎಂದು ಹೇಳಿದರು.
''ಗ್ಯಾರಂಟಿಗಳ ಕೆಲವು ಯೋಜನೆಗಳು ಐಟಿ ರಿಟರ್ನ್ ಫೈಲ್ ಮಾಡುವವರಿಗೆ ನೀಡಲು ಬರುತ್ತೋ ಅಥವಾ ಬರುವುದಿಲ್ಲವೋ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲದಕ್ಕೂ ಮುಖ್ಯವಾಗಿ ಗ್ಯಾರಂಟಿಗಳು ಎಲ್ಲ ವರ್ಗದ ಬಡವರಿಗೆ ಮುಟ್ಟಬೇಕು. ಅದೇ ನಮ್ಮ ಆಸೆ. ಇದರ ಜೊತೆಗೆ ಮಧ್ಯಮ ವರ್ಗದವರಿಗೂ ಯೋಜನೆಗಳು ಮುಟ್ಟಬೇಕಾಗಿದೆ. ಗ್ಯಾರಂಟಿಗಳನ್ನು ಇಡೀ ರಾಜ್ಯಕ್ಕೆ ಕೊಡ್ಬೇಕಾದ್ರೆ ಸ್ವಲ್ಪ ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಿ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಮಧ್ಯಾಹ್ನ ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ 35 ಸೈನಿಕರು: ಆಸ್ಪತ್ರೆಗೆ ದಾಖಲು