ದಾವಣಗೆರೆ: ಅವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ದಲಿತ ಕುಟುಂಬಗಳು. ಸರ್ಕಾರ ಇವರಿಗೆ ಸಾಕಷ್ಟು ಸೌಲಭ್ಯ ನೀಡಿದರೂ ಆ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದರು. ಆದರೆ, ಇಲ್ಲೊಬ್ಬ ಗ್ರಾಮದ ಜಮೀನ್ದಾರ ಇವರ ಮೇಲೆ ದರ್ಪ ಮೆರೆದಿದ್ದಾನೆ. ತನ್ನ ಅಡಕೆ ತೋಟಕ್ಕೆ ರಸ್ತೆ ಮಾಡುವ ಸಲುವಾಗಿ ದಲಿತ ಕುಟುಂಬಗಳಿಗೆ ಸೇರಿದ ಶೌಚಾಲಯ ನೆಲಕ್ಕುರಿಳಿಸಿ, ಗುಡಿಸಲುಗಳಿಗೆ ಬೆಂಕಿ ಹಂಚಿ ಕ್ರೌರ್ಯ ಮೆರೆದಿದ್ದಾನೆ.
ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿ ಬಳಿಯ ಕಾಟೆನಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಗಳು ಅನುಭವಿಸುತ್ತಿರುವ ನರಕಯಾತೆ ಇದು. ದಲಿತ ಕುಟುಂಬಗಳು ರೋಸಿಹೋಗಲು ಪ್ರಮುಖ ಕಾರಣ ಈ ಗ್ರಾಮದ ಜಮೀನ್ದಾರ ವೀರೇಶ್, ಈತ ತನ್ನ ಅಡಕೆ ತೋಟಕ್ಕೆ ರಸ್ತೆ ಮಾಡಲು ದಲಿತ ಕುಟುಂಬಗಳಿಗೆ ತೊಂದರೆ ಕೊಡುತ್ತಿದ್ದಾನೆ.
ಸರ್ಕಾರ ನೀಡಿದ ಶೌಚಾಲಯಗಳನ್ನೇ ಧ್ವಂಸ ಮಾಡಿ, ದಲಿತರ ಗುಡಿಸಲಿಗೆ ಬೆಂಕಿ ಇಟ್ಟಿದ್ದಾನೆ. ಮೇಲಾಗಿ ಹಲ್ಲೆ ಕೂಡಾ ಮಾಡಿದ್ದಾನೆ. ದಾಖಲೆಗಳ ಪ್ರಕಾರ, ಆ ಸ್ಥಳ ದಲಿತ ಕುಟುಂಬಗಳದ್ದು. ಇಂತಹ ಪರಿಸ್ಥಿತಿಯಲ್ಲಿ ಉದ್ದೇಶ ಪೂರ್ವಕವಾಗಿ ದಬ್ಬಾಳಿಕೆ ಮಾಡಿ ಅವರನ್ನ ಖಾಲಿ ಮಾಡಿಸುವ ಹುನ್ನಾರ ಮಾಡಿ ನಿತ್ಯ ಹಿಂಸೆ ಕೊಡುತ್ತಿದ್ದಾನೆ.
ವೀರೇಶ್ ಕಳೆದ ಹಲವಾರು ವರ್ಷಗಳಿಂದ ಹೀಗೆ ಹಿಂಸೆ ಕೊಡುತ್ತಲೇ ಇದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನ ಆಗುತ್ತಿಲ್ಲ. ಈಗ ಪೊಲೀಸರೇ ಪ್ಲಾನ್ ಮಾಡಿ ಆತನ ಕಡೆಯಿಂದ ಒಂದು ದೂರು ತೆಗೆದುಕೊಂಡು ದಲಿತ ಹುಡುಗರನ್ನ ಹುಡುಕಾಡುವ ಪ್ಲಾನ್ ಮಾಡಿದ್ದಾರೆ.