ದಾವಣಗೆರೆ:ಗ್ರಾಮದಚರಂಡಿಗಳನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯ್ತಿ ಆತಳಿತದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾದು ಕಾದು ಸ್ತುಸ್ತಾದ ಗ್ರಾಮಸ್ಥರು ಚರಂಡಿಯಲ್ಲಿನ ಕೆಸರನ್ನು ಗ್ರಾಪಂ ಕಚೇರಿಯೊಳಗೇ ತಂದು ಸುರಿದು ಕಿಡಿಕಾರಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ. ಗ್ರಾಪಂ ಪಿಡಿಒ ಕುಳಿತುಕೊಳ್ಳುವ ಟೇಬಲ್ ಮೇಲೆಯೇ ಚರಂಡಿ ತ್ಯಾಜ್ಯ ಸುರಿದು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
''ಗ್ರಾಮದಲ್ಲಿರುವ ಚರಂಡಿಗಳು ತುಂಬಿಕೊಂಡಿದ್ದು, ಗಬ್ಬೆದ್ದು ನಾರುತ್ತಿವೆ. ಚರಂಡಿ ನೀರು ನಿಂತುಕೊಂಡಿರುವುದರಿಂದ ಸೊಳ್ಳೆಗಳು ಕಾಟವೂ ಮಿತಿ ಮೀರಿದೆ. ಇದರಿಂದ ಗ್ರಾಮದಲ್ಲಿರುವ ನಿವಾಸಿಗಳು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ಪಿಡಿಒಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ದಿದ್ದಿಗೆ ಗ್ರಾಪಂ ಪಿಡಿಒ ಅವರು ಸಕಾಲಕ್ಕೆ ಕಚೇರಿಗೆ ಬರುವುದಿಲ್ಲ. ಗ್ರಾಮಗಳ ನೈರ್ಮಲ್ಯದ ಬಗ್ಗೆ ಗಮನಹರಿಸುತ್ತಿಲ್ಲ'' ಎಂದು ಗ್ರಾಮಸ್ಥರಾದ ಶೇಖರ್, ಮಹದೇವಪ್ಪ, ಸುರೇಶ್, ಪ್ರವೀಣ್, ರಾಮಣ್ಣ, ವಿಕಾಸ್ ಆಕ್ರೋಶ ವ್ಯಕ್ತಪಡಿಸಿದರು.
''ದಿದ್ದಿಗಿ ಗ್ರಾಪಂ ಪಿಡಿಒ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ ಇರುವುದರಿಂದ ಸರ್ಕಾರಿ ಕೆಲಸಗಳಿಗಾಗಿ ಪದೇ ಪದೆ ಅಲೆದಾಡುವಂತಾಗಿದೆ. ಅಧಿಕಾರಿಗಳು ಕೈ ತುಂಬಾ ವೇತನ ಪಡೆಯುತ್ತಿದ್ದರೂ ಸಾರ್ವಜನಿಕರ ಕೆಲಸ ಮಾಡಿಕೊಡುತ್ತಿಲ್ಲ. ಈ ರೀತಿಯ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು'' ಎಂದು ಗ್ರಾಮದ ನಿವಾಸಿಗಳು ಆಗ್ರಹಿಸಿದರು.