ದಾವಣಗೆರೆ:ರೈಲಿನಲ್ಲಿ ಕಳುವಾಗಿದ್ದ ಯಾವುದೇ ವಸ್ತುಗಳು ಮರಳಿ ಸಿಗುವುದು ಕಷ್ಟ. ಆದರೆ, ದಾವಣಗೆರೆಯ ರೈಲ್ವೆ ಪೊಲೀಸರು ಬಂಗಾರದ ಒಡವೆ ಕಳೆದುಕೊಂಡಿದ್ದ ವ್ಯಕ್ತಿಗೆ ಆ ವಸ್ತುಗಳು ಮರಳಿ ಸಿಗುವಂತೆ ಮಾಡಿದ್ದಾರೆ. ದಾವಣಗೆರೆ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ವಿಜಯಪುರ - ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ಕಳವಾಗಿದ್ದ ಬಂಗಾರದ ಒಡವೆ ಮೊಬೈಲ್ ಹಾಗೂ ನಗದನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳವಾಗಿದ್ದ 41 ಗ್ರಾಂ ಬಂಗಾರದ ಒಡವೆ ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರು ವಾರಸುದಾರರಿಗೆ ಮುಟ್ಟಿಸಿದರು.
ಅರೋಪಿಯನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು:ಬೀದರ್ ಜಿಲ್ಲೆಯ ಹುಮ್ನಾಬಾದ್ ನಿವಾಸಿ ಸಂದೀಪ್ ಅವರು, ಬಂಗಾರದ ಒಡವೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಕಳೆದುಕೊಂಡಿದ್ದರು. ಬಳಿಕ ಸಂದೀಪ್ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ರೈಲ್ವೆ ಪೊಲೀಸರು ತನಿಖೆ ಕೈಗೊಂಡು ಬಂಗಾರದ ಒಡುವೆ ಹಾಗೂ ಮೊಬೈಲ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅರೋಪಿ ನೀಲಗುಂದ ಗ್ರಾಮದ ಗೋಪಿಕೃಷ್ಣನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು, ಅರೋಪಿಯಿಂದ 2.29 ಲಕ್ಷ ಮೌಲ್ಯದ 41 ಗ್ರಾಂ ಬಂಗಾರ ಆಭರಣ, ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದರು. ಇನ್ನು ರೈಲ್ವೆ ಪೊಲೀಸರು ವಸ್ತುಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರಿಂದ ಬಂಗಾರದ ಒಡವೆ ವಾರಸುದಾರ ಸಂದೀಪ್ ಅವರು ರೈಲ್ವೆ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.
ಆಭರಣಗಳ ಕಳ್ಳತನದ ಬಗ್ಗೆ ಆಗ್ಬೇಕಿದೆ ಜಾಗೃತಿ: ರೈಲು ನಿಲ್ದಾಣಗಳಲ್ಲಿ ಬಂಗಾರ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳು ಕಳ್ಳತನ ಆಗ್ತಿರುವುದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದರಿಂದ ಪ್ರಯಾಣಿಕರಿಗೆ ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಜಾಗೃತಿ ಮೂಡಿಸಿದರೆ, ಜನ ಸ್ವಲ್ಪ ಮಟ್ಟಿಗಾದರೂ ಜಾಗೃತರಾಗುತ್ತಾರೆ.
ಕಳೆದಿದ್ದ ಚಿನ್ನಾಭರಣ ವಾರಸುದಾರರಿಗೆ ತಲುಪಿಸಿದ ಹೋಮ್ ಗಾರ್ಡ್:ಪ್ರಯಾಣಿಕರೊಬ್ಬರು ರೈಲ್ವೆ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಸೂಟ್ಕೇಸ್ ಅನ್ನು ಪತ್ತೆಹಚ್ಚಿ ಹಿಂದಿರುಗಿಸುವ ಮೂಲಕ ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ಮೆಚ್ಚುಗೆ ಗಳಿಸಿದ್ದರು. ಗೃಹ ರಕ್ಷಕ ದಳದ ಸಿಬ್ಬಂದಿ ಗುರುರಾಜ್ ಪ್ರಾಮಾಣಿಕತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ರಮೇಶ್ ಚಂದ್ ಎಂಬುವವರು ಇತ್ತೀಚೆಗೆ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಸೂಟ್ಕೇಸ್ನ್ನು ಕಳೆದುಕೊಂಡಿದ್ದರು. ಈ ಕುರಿತು ರಮೇಶ್ ಚಂದ್ ಕೆಎಸ್ಆರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಅನ್ವಯ ಶೋಧ ನಡೆಸಿದಾಗ ಗೃಹ ರಕ್ಷಕ ದಳದ ಸಿಬ್ಬಂದಿ ಗುರುರಾಜ್ಗೆ ಸೂಟ್ಕೇಸ್ ಲಭಿಸಿತ್ತು. ನಂತರ ಅದನ್ನು ವಾರಸುದಾರರಿಗೆ ಮರಳಿ ನೀಡಲಾಗಿತ್ತು.
ಇದನ್ನೂ ಓದಿ:ಬೆಂಗಳೂರು ಏರ್ಪೋರ್ಟ್ನಲ್ಲಿ 4 ಕೋಟಿ ಮೌಲ್ಯದ ಅಕ್ರಮ ಚಿನ್ನ ಸಾಗಣೆ: ಓರ್ವನ ಬಂಧನ