ದಾವಣಗೆರೆ: ಇಡೀ ರಾಜ್ಯದಲ್ಲಿ ದೇಶ ಸೇವೆಗೆ ಹೆಚ್ಚು ಯೋಧರನ್ನು ನೀಡಿದ ತಾಲೂಕು ಮಡಿಕೇರಿಯಾದರೆ, ಗ್ರಾಮಗಳ ಪೈಕಿ ದಾವಣಗೆರೆಯ ತೋಳಹುಣಸೆ ಗ್ರಾಮ ಅಗ್ರ ಸ್ಥಾನದಲ್ಲಿದೆ. ಈ ಪುಟ್ಟ ಗ್ರಾಮ ದೇಶ ಸೇವೆಗಾಗಿ ಹೆಚ್ಚು ಯೋಧರನ್ನು ನೀಡಿದ್ದು, ಯೋಧರ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಾವಣಗೆರೆ ತಾಲೂಕಿನ ಪುಟ್ಟ ಗ್ರಾಮವಾಗಿರುವ ತೋಳಹುಣಸೆ ಗ್ರಾಮ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಗ್ರಾಮದಲ್ಲಿ ಮನೆಗೆ ಇಬ್ಬರು ಇಲ್ಲವೇ ನಾಲ್ವರಂತೆ ಭಾರತೀಯ ಸೇನೆಗೆ ಸೇರಿ ನಮ್ಮ ರಕ್ಷಣೆ ಮಾಡುತ್ತಿದ್ದರಿಂದ ಈ ಗ್ರಾಮಕ್ಕೆ ಯೋಧರ ತವರೂರು ಎಂಬ ಖ್ಯಾತಿ ದೊರೆತಿದೆ.
ಮಿಲಿಟರಿ ಸೇರಿದ್ದಾರೆ ನೂರಾರು ಜನ ಯುವಕರು
ತೋಳಹುಣಸೆ ಗ್ರಾಮದ ಜನಸಂಖ್ಯೆ ನಾಲ್ಕು ಸಾವಿರಕ್ಕೂ ಹೆಚ್ಚು. ಇವರಲ್ಲಿ ಸುಮಾರು ಅರ್ಧದಷ್ಟು ಮಂದಿ ಕೆಲಸದ ನಿಮಿತ್ತ ಹೊರ ಊರುಗಳಲ್ಲಿದ್ದಾರೆ. ಈಗ ಗ್ರಾಮದಲ್ಲಿರೋದು ಸುಮಾರು ಎರಡು ಸಾವಿರ ಜನ ಮಾತ್ರ. 1994 ರಲ್ಲಿ ಮೊಟ್ಟಮೊದಲ ಬಾರಿಗೆ ಈ ಗ್ರಾಮದಿಂದ 4 ಜನ ಯುವಕರು ಉತ್ಸಾಹದಿಂದ ಸೇನೆಗೆ ಸೇರಿದ್ದರು. ಬಳಿಕ ಹಂತ ಹಂತವಾಗಿ ಇದೀಗ ಒಟ್ಟು 240 ಜನ ಯುವಕರು ಭಾರತದ ವಿವಿಧ ಸ್ಥಳಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. 30ಕ್ಕೂ ಹೆಚ್ಚು ಜನ ನಿವೃತ್ತಿ ಪಡೆದು ಇದೇ ತೋಳಹುಣಸೆ ಗ್ರಾಮದ ಯುವಕರಿಗೆ ಸೇನೆ ಸೇರುವಂತೆ ಹುರಿದುಂಬಿಸುತ್ತಿದ್ದು, ಯುವಕರು ಸೇನೆಯಲ್ಲಿ ಸೇರಲು ಜಿಮ್ ಹಾಗು ಗರಡಿ ಮನೆಯಲ್ಲಿ ಕಸರತ್ತು ಮಾಡುತ್ತ ತಯಾರಿ ನಡೆಸುತ್ತಿದ್ದಾರೆ.
ಈ ಗ್ರಾಮದ ಯುವಕರಿಗೆ ಸೇನೆ ಸೇರುವುದೇ ಮುಖ್ಯ ಗುರಿ ಯುವಕರು ಸೇನೆ ಸೇರಲು ತಾಯಂದಿರೇ ಸ್ಫೂರ್ತಿ
ತೋಳಹುಣಸೆ ಗ್ರಾಮದ ಯುವಕರು ಬಿಎಸ್ಎಫ್, ಆರ್ಮಿ, ಸಿಎಸ್ಎಫ್, ಸಿಆರ್ಪಿಎಫ್ಗಳಲ್ಲಿ ಸೇವೆ ಸಲ್ಲಿಸಲು ಈ ಗ್ರಾಮದ ತಾಯಂದಿರ ಸ್ಪೂರ್ತಿಯೇ ಕಾರಣವಂತೆ. ಇಲ್ಲಿನ ತಾಯಂದಿರು ತಮ್ಮ ಮಕ್ಕಳಿಗೆ ಸೇನೆಯಲ್ಲಿ ಸೇರಲು ನಿರಾಕರಿಸುವುದಿಲ್ಲವಂತೆ. ಬದಲಾಗಿ ಸೇನೆಯಲ್ಲಿ ಸೇರಿ ಒಳ್ಳೆಯ ಹೆಸರು ತರುವಂತೆ ಗಡಿಕಾಯಲು ಕಳುಹಿಸಿಕೊಡುವ ಪದ್ದತಿ ಈ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.
ಮತ್ತೊಂದು ಒಳ್ಳೆಯ ವಿಚಾರ ಅಂದರೆ 1994 ರಿಂದ ಇಲ್ಲಿಯತನಕ ಈ ಗ್ರಾಮದ ಯಾವೊಬ್ಬ ಯೋಧ ಕೂಡ ಜೀವ ಕಳೆದು ಕೊಳ್ಳದೆ ನಿಷ್ಠಾವಂತರಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.