ದಾವಣಗೆರೆ : ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದ ಬಾಲಕನ ಮೇಲೆ ಗೇಟ್ ಮುರಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹರಪನಹಳ್ಳಿ ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಬಳಿ ನಡೆದಿದೆ. ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ಮಲ್ಲಿಕಾರ್ಜುನ ಎಂಬುವರ ಪುತ್ರ ಗೌತಮ್ (7) ಮೃತ ಬಾಲಕ.
ಮೃತ ಗೌತಮ್ ತನ್ನ ಆಧಾರ ತಿದ್ದುಪಡಿಗೆ ಪೋಷಕರೊಂದಿಗೆ ಬಿಎಸ್ ಎನ್ ಎಲ್ ಕಚೇರಿ ಆವರಣದಲ್ಲಿ ಇರುವ ಆಧಾರ ತಿದ್ದುಪಡಿ ಕೇಂದ್ರಕ್ಕೆ ಬಂದಿದ್ದನು. ಈ ವೇಳೆ, ಕಚೇರಿ ಗೇಟ್ ಗೌತಮ್ ಮೇಲೆ ಬಿದ್ದಿದೆ. ಈ ಸಂದರ್ಭ ಗೌತಮ್ನ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಗೌತಮ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.