ದಾವಣಗೆರೆ: ಮೊದಲ ಹಂತದ ಕೊರೊನಾ ಹಾವಳಿ ಸಂದರ್ಭದಲ್ಲಿ ಶೀತ, ಕೆಮ್ಮು, ಜ್ವರ ಬಂದ್ರೆ ಸಾಕು, ಬೆಣ್ಣೆನಗರಿ ಜನ್ರು ಕೊರೊನಾ ಪರೀಕ್ಷಾ ಕೇಂದ್ರಗಳತ್ತ ಮುಖ ಮಾಡುತ್ತಿದ್ದರು. ಕೋವಿಡ್ ಪರೀಕ್ಷಾ ಕೇಂದ್ರಗಳು ಸಹ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದವು. ಇಂದಿಗೂ ಕೂಡ ಕೋವಿಡ್ ಪರೀಕ್ಷಾ ಕೇಂದ್ರಗಳು ಅದೇ ರೀತಿ ಸೇವೆ ಒದಗಿಸುತ್ತಿವೆ.
ಕಳೆದ ವರ್ಷದ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು ಹಾಗು ಸ್ವಾಬ್ ತೆಗೆಯುವ ಸಿಬ್ಬಂದಿ ಹಗಲಿರುಳೆನ್ನದೇ ಕೆಲಸ ಮಾಡಿ ಕೊರೊನಾ ದೂರ ಮಾಡಲು ಪ್ರಯತ್ನಿಸಿದರು. ಅದ್ರೀಗ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಮತ್ತೆ ಕೋವಿಡ್ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗೆ ಕೆಲಸ ಹೆಚ್ಚಾಗುವ ಭೀತಿ ಎದುರಾಗಿದೆ. ಈಗಾಗಲೇ ದಾವಣಗೆರೆ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜನರ ಸ್ವಾಬ್ ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಖಾಸಗಿಯಾಗಿ ಬಾಪೂಜಿ ಹಾಗು ಎಸ್ಎಸ್ ಹೈಟೆಕ್ ಆಸ್ಪತ್ರೆಗಳಲ್ಲಿ ಕೂಡ ಸ್ವಾಬ್ ಟೆಸ್ಟ್ ನಡೆಯುತ್ತಿದೆ.
ಕಳೆದ ವರ್ಷ - ಪ್ರಸ್ತುತ ವರ್ಷದ ಸ್ವಾಬ್ ಟೆಸ್ಟ್:
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ 32 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇಬ್ಬರ ವರದಿ ಮಾತ್ರ ಪಾಸಿಟಿವ್ ಬಂದಿತ್ತು. ಬಳಿಕ ಏಪ್ರಿಲ್ ತಿಂಗಳಿನಲ್ಲಿ ನೋಡುವುದಾದರೆ 416 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, 2 ಪಾಸಿಟಿವ್ ವರದಿ ಬಂದಿದ್ದವು. ಇದಲ್ಲದೆ ಆಗಸ್ಟ್ ತಿಂಗಳಲ್ಲಿ 46,909 ಸ್ವಾಬ್ ಟೆಸ್ಟ್ ಪೈಕಿ 7,648 ಪಾಸಿಟಿವ್ ವರದಿ ಬಂದಿದ್ದವು. ಆಕ್ಟೋಬರ್ ತಿಂಗಳಲ್ಲಿ 58,244 ಸ್ವಾಬ್ ಟೆಸ್ಟ್ ಮಾಡಿದ್ದು, 4,061 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು.