ದಾವಣಗೆರೆ:ಬೆಳಗಾವಿಯ ಪೀರನವಾಡಿಯಲ್ಲಿ 24 ಗಂಟೆಯೊಳಗೆ ರಾಯಣ್ಣ ಪ್ರತಿಮೆ ನಿರ್ಮಾಣ ಕಾರ್ಯವನ್ನು ರಾಜ್ಯ ಸರ್ಕಾರ ಆರಂಭಿಸಬೇಕು. ಇಲ್ಲದಿದ್ದರೆ ಆಗಸ್ಟ್ 31 ರಂದು ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಯಾವ ಸಚಿವರನ್ನೂ ಒಳಗೆ ಹೋಗಲು ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ನಿರ್ಮಿಸಲೇಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ಮುತ್ತಿಗೆ ಹಾಕುತ್ತೇವೆ ಎಂದು ತಿಳಿಸಿದರು.
ಪ್ರತಿಮೆ ಸ್ಥಾಪನೆ ಕಾರ್ಯ ಆರಂಭಿಸದಿದ್ದರೆ ದೊಡ್ಡ ಮಟ್ಟದಲ್ಲಿ ಚಳವಳಿ ನಡೆಸುವುದು ನಿಶ್ಚಿತ. ನಾಳೆ ಬೆಳಗಾವಿಯ ಸುವರ್ಣಸೌಧದ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತೇನೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮಹಾರಾಷ್ಟ್ರ ಏಜೆಂಟ್ಗಳಂತೆ ವರ್ತಿಸುತ್ತಿವೆ. ಅವರು ಎಂಇಎಸ್ ಪರವೂ ಇದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೇಳೋರು, ಕೇಳೋರು ಇಲ್ಲದಂತ ಸರ್ಕಾರ ಇದೆ. ಕೋವಿಡ್ನಿಂದ ನಿತ್ಯವೂ ಜನರು ಸಾಯುತ್ತಿದ್ದಾರೆ. ಸಿಎಂ ಹೇಗೆ ನಿದ್ರೆ ಮಾಡ್ತಾರೋ ಗೊತ್ತಿಲ್ಲ ಎಂದು ವಾಟಾಳ್ ನಾಗರಾಜ್ ವ್ಯಂಗ್ಯವಾಡಿದರು.