ಕರ್ನಾಟಕ

karnataka

By

Published : Nov 11, 2020, 6:12 PM IST

ETV Bharat / state

ಜವಳಿ ಉದ್ಯಮಕ್ಕೆ ಬೆಳಕು ತರುತ್ತಿದೆ ಬೆಳಕಿನ ಹಬ್ಬ..

ಬಟ್ಟೆ ಅಂಗಡಿಗಳ ವ್ಯಾಪಾರದಲ್ಲಿ ಸುಧಾರಣೆ ಕಂಡು ಬಂದಿದ್ದರೆ, ಟೈಲರ್​​ಗಳ ಗೋಳು ಮುಗಿದಿಲ್ಲ. ಎಲ್ಲರೂ ರೆಡಿಮೇಡ್​ ಬಟ್ಟೆಗಳಿಗೆ ಅಧಿಕ (ಶೇ.70ರಷ್ಟು) ಒಲವು ತೋರುತ್ತಿರುವ ಪರಿಣಾಮ ಟೈಲರ್​​​ ಅಂಗಡಿಗಳು ಖಾಲಿ ಹೊಡೆಯುತ್ತಿವೆ..

Textile industry recovery in davanagere
ಜವಳಿ ಉದ್ಯಮ

ದಾವಣಗೆರೆ :ಲಾಕ್​ಡೌನ್​​ನಿಂದ ನೆಲಕಚ್ಚಿದ್ದ ಜವಳಿ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಆರ್ಥಿಕತೆಯು ಸಹಜ ಸ್ಥಿತಿಗೆ ಮರಳುತ್ತಿದೆ. ದಸರಾ, ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ವ್ಯಾಪಾರ, ವಹಿವಾಟು ಅಷ್ಟಕಷ್ಟೇ.. ಇದರಿಂದ ಕಂಗೆಟ್ಟು ಹೋಗಿದ್ದ ದೊಡ್ಡ ದೊಡ್ಡ ಮಳಿಗೆಗಳ ವ್ಯಾಪಾರಿಗಳಿಗೆ ದೀಪಾವಳಿ ಸಂತಸ ತಂದಿದೆ.

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಲು ಜನರು ಮುಂದೆ ಬರುತ್ತಿದ್ದು, ಕತ್ತಲಲ್ಲಿದ್ದ ಟೆಕ್ಸ್​​​ಟೈಲ್ಸ್ ಉದ್ಯಮಕ್ಕೆ ಸ್ವಲ್ಪ ಮಟ್ಟಿಗೆ ಬೆಳಕು ಸಿಕ್ಕಂತಾಗಿದೆ. ಈ ಹಿಂದೆ ಕೊರೊನಾ ಹರಡುವ ಭೀತಿ ಹಿನ್ನೆಲೆ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದರು. ಹೀಗಾಗಿ, ಜವಳಿ ಉದ್ಯಮಿಗಳು ನಷ್ಟಕ್ಕೆ ಒಳಗಾಗಿದ್ದರು.

ದಸರಾ, ಈದ್ ಮಿಲಾದ್ ಹಬ್ಬಗಳು ಜವಳಿ ಉದ್ಯಮಕ್ಕೆ ಆಶಾದಾಯಕ ಆಗಿರಲಿಲ್ಲ. ಅದರಲ್ಲೂ ಕೊರೊನಾ ಪ್ರಕರಣಗಳು ತೀರಾ ಕಡಿಮೆ ದಾಖಲಾಗುತ್ತಿದ್ದು, ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲು ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ವಾರದಿಂದ ವ್ಯಾಪಾರದ ಭರಾಟೆ ಜೋರಾಗಿದೆ. ಗ್ರಾಮೀಣ ಪ್ರದೇಶದ ಜನರು ನಗರದತ್ತ ಮುಖ‌ ಮಾಡುತ್ತಿದ್ದು, ಅಂಗಡಿಗಳಲ್ಲಿ ಜನಜಂಗುಳಿ‌ ಕಂಡು ಬರುತ್ತಿದೆ.

ಜವಳಿ ಉದ್ಯಮಿ ಯಲ್ಲಪ್ಪ ಅವರ ಅಭಿಪ್ರಾಯ

ರೆಡಿಮೇಡ್​ ಬಟ್ಟೆಗೆ ಬಲು ಬೇಡಿಕೆ :ಬಟ್ಟೆ ಅಂಗಡಿಗಳ ವ್ಯಾಪಾರದಲ್ಲಿ ಸುಧಾರಣೆ ಕಂಡು ಬಂದಿದ್ದರೆ, ಟೈಲರ್​​ಗಳ ಗೋಳು ಮುಗಿದಿಲ್ಲ. ಎಲ್ಲರೂ ರೆಡಿಮೇಡ್​ ಬಟ್ಟೆಗಳಿಗೆ ಅಧಿಕ (ಶೇ.70ರಷ್ಟು) ಒಲವು ತೋರುತ್ತಿರುವ ಪರಿಣಾಮ ಟೈಲರ್​​​ ಅಂಗಡಿಗಳು ಖಾಲಿ ಹೊಡೆಯುತ್ತಿವೆ.

ಈ ಹಿಂದೆ ದೀಪಾವಳಿ ಹಬ್ಬ ಬಂತೆಂದರೆ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೆವು. ಆದರೀಗ ಮಾಮೂಲಿನಂತೆ ನಡೆಯುತ್ತಿದೆ ಎಂಬುದು ಟೈಲರ್​​​ಗಳ ಮಾತು. ಹಾಗಾಗಿ, ಬಟ್ಟೆ ಹೊಲಿಯುವ ಕಾರ್ಮಿಕರಿಗೆ ದೀಪಾವಳಿ ಬೆಳಕು ತಂದಿಲ್ಲ.

ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಹೆಚ್ಚಾಗಿ ಬಟ್ಟೆ ಖರೀದಿಯಲ್ಲಿ ಹೆಚ್ಚು ತೊಡಗಿದ್ದಾರೆ‌. ಮದುವೆ ಸೇರಿದಂತೆ ಶುಭ-ಸಮಾರಂಭಗಳು ಈಗೀಗ ಆರಂಭವಾಗುತ್ತಿದ್ದು, ಜವಳಿ ಉದ್ಯಮ ಚೇತರಿಕೆ ಹಾದಿಗೆ ಸಾಗುತ್ತಿದೆ. ಹಬ್ಬ ಮುಗಿದ ಬಳಿಕ ಇದೇ ವಾತಾವರಣ ಇರುತ್ತದೆ ಎಂಬ ಖಚಿತತೆ‌ ಇಲ್ಲ‌.

ದಸರಾ ಹಬ್ಬದ ವೇಳೆ ವ್ಯಾಪಾರವಾಗದಿದ್ದರೂ ಸದ್ಯ ದೀಪಾವಳಿ ಹಬ್ಬಕ್ಕೆ ವ್ಯಾಪಾರ ಹೆಚ್ಚಾಗುತ್ತಿರುವುದು ವರ್ತಕರಿಗೆ ನೆಮ್ಮದಿ ತಂದಿದೆ.

ABOUT THE AUTHOR

...view details