ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ವೇದಿಕೆ ವತಿಯಿಂದ ರಾಜ್ಯದ ಪುಣ್ಯಕ್ಷೇತ್ರ ಧರ್ಮಸ್ಥಳ ಮಾದರಿಯಲ್ಲಿ, 45 ದಿನಗಳ ಕಾಲ ಶ್ರಮಿಸಿ, ನಿರ್ಮಿಸಿದ್ದ ಭವ್ಯವಾದ ಮಂಟಪ ನೆಲಕ್ಕುರುಳಿದೆ. ಇಂದು ಬೀಸಿದ ಗಾಳಿ-ಮಳೆಗೆ ಮಂಟಪ ಕುಸಿದು ಬಿದ್ದಿದೆ.
ನಾಲ್ಕು ದಿನಗಳ ಹಿಂದೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಜನರು ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದರು. ಕೋಲ್ಕತ್ತಾ ಮೂಲದ 18 ಜನರ ತಂಡ ಸತತ 45 ದಿನಗಳ ಕಾಲ ಕೆಲಸ ಮಾಡಿ, 20 ಲಕ್ಷ ರೂ. ವೆಚ್ಚದಲ್ಲಿ ಈ ಬೃಹತ್ ಧರ್ಮಸ್ಥಳ ಮಾದರಿಯನ್ನು ನಿರ್ಮಿಸಿದ್ದಾರೆ. 45 ಅಡಿ ಎತ್ತರ, 160 ಅಡಿ ಅಗಲ, 120 ಅಡಿ ಉದ್ದದ ಈ ಬೃಹತ್ ಮಂಟಪ ಧರ್ಮಸ್ಥಳದ ಮೂಲ ಮಾದರಿಯಂತಿದೆ. ಈ ಮಂಟಪದಲ್ಲಿ 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, 10 ಅಡಿ ಎತ್ತರದ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.