ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಹಳ್ಳಿ ಮೇಷ್ಟ್ರು, ಹಳೆ ವಿದ್ಯಾರ್ಥಿಗಳು ದಾವಣಗೆರೆ:ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳು ಎಂದರೆಕೆಲಪೋಷಕರುಮೂಗು ಮುರಿಯುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಕಳಪೆ ಶಿಕ್ಷಣ ಮತ್ತು ಸೌಲಭ್ಯಗಳ ಕೊರತೆ ಇದೆ ಎಂದು ತಾತ್ಸಾರ ಮಾಡುತ್ತಾರೆ. ಆದರೆ, ಈ ಮಾತುಗಳನ್ನು ಸುಳ್ಳಾಗಿಸಿದೆ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಕೆಲವು ತಿಂಗಳುಗಳ ಹಿಂದೆ ಪಾಳು ಬಿದ್ದಂತಾಗಿದ್ದ ಈ ಶಾಲೆ ಈಗ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಅಲ್ಲಿ ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡವರ ಜವಾಬ್ದಾರಿಯೂ ಹೌದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಶಾಲೆಯ ಶಿಕ್ಷಕ ಲಕ್ಷ್ಮಿ ನಾರಾಯಣ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು.
1962ರಲ್ಲಿ ಆರಂಭವಾಗಿದ್ದ ಕೆಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲವು ತಿಂಗಳುಗಳಿಂದ ದುಸ್ಥಿತಿಯಲ್ಲಿತ್ತು. ಇದರಿಂದಾಗಿ ಪೋಷಕರು ಶಾಲೆಯಿಂದ ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗಳಿಗೆ ಸೇರಿಸಲು ಮುಂದಾಗಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಶಿಕ್ಷಕ ಲಕ್ಷ್ಮಿ ನಾರಾಯಣ, ಹೇಗಾದರೂ ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಪಣ ತೊಟ್ಟು, ಗ್ರಾಮಸ್ಥರು, ಶಾಲೆಯ ಹಳೆ ವಿದ್ಯಾರ್ಥಿಗಳನ್ನೊಳಗೊಂಡ ವಾಟ್ಸ್ಆ್ಯಪ್ ಗ್ರೂಪ್ವೊಂದನ್ನು ಮಾಡಿ. ಅದರಲ್ಲಿ ಶಾಲೆಯ ಪ್ರಸ್ತುತ ಸ್ಥಿತಿಯನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟು ಶಾಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಅವರ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಾಯ ಮಾಡಿ ಕೆಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಈ ಮೂಲಕ ಕೆಂಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿದ ಹಳೆ ವಿದ್ಯಾರ್ಥಿಗಳು:ಈ ಕುರಿತು ಶಿಕ್ಷಕ ಲಕ್ಷ್ಮಿ ನಾರಾಯಣ ಮಾತನಾಡಿ, "ಶಾಲೆ ದುಸ್ಥಿತಿಗೆ ತಲುಪಿತ್ತು. ನಾನು ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಶಾಲೆಯ ದುಃಸ್ಥಿತಿಯನ್ನು ಅವರ ಗಮನಕ್ಕೆ ತಂದಿದ್ದೆ. ತಕ್ಷಣ ಅವರೆಲ್ಲ ಶಾಲೆಯನ್ನು ಉಳಿಸಬೇಕು ಎಂದು ನನ್ನ ಜೊತೆ ಕೈ ಜೋಡಿಸಿ ಸಹಕಾರ ಕೊಟ್ಟರು. ಈ ಶಾಲೆಯಲ್ಲಿ ಓದಿ ಉದ್ಯೋಗದಲ್ಲಿರುವ ಮತ್ತು ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು, ನೀರಿನ ಫಿಲ್ಟರ್, ಬಣ್ಣ, ಮಕ್ಕಳಿಗೆ ಸಮವಸ್ತ್ರ ಮತ್ತು ಇತರ ವಸ್ತುಗಳ ರೂಪದಲ್ಲಿ ಸಹಾಯ ಮಾಡಿದ್ದಾರೆ. ಈ ಶಾಲೆ ಅಭಿವೃದ್ಧಿಗೆ ಕಾರಣರಾದ ಹಳೆ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದರು.
"ಮೊದಲು ನಾನು ಬೇರೆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ, ಮ್ಯೂಚುಯಲ್ ಟ್ರಾನ್ಸ್ಫರ್ನಲ್ಲಿ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿಗೆ ಬಂದೆ. ನನಗೆ ಪೋಷಕರು ಕರೆ ಮಾಡಿ ನೀವು ಇಲ್ಲಿಗೆ ಬಂದರೆ ಮಕ್ಕಳನ್ನು ಇಲ್ಲಿಯೇ ಓದಿಸುತ್ತೇವೆ, ಇಲ್ಲ ಎಂದರೆ ಟಿಸಿ ಪಡೆದು ಬೇರೆ ಕಡೆ ಮಕ್ಕಳನ್ನು ಸೇರಿಸುತ್ತೇವೆ ಎನ್ನುತ್ತಿದ್ದರು. ಆಗ ನಾನು ಅವರಿಗೆ ಒಮ್ಮೆ ಸರ್ಕಾರಿ ಶಾಲೆ ಮುಚ್ಚಿದರೆ, ಮತ್ತೆ ತೆರಯಲು ತುಂಬಾ ಕಷ್ಟ ಆಗುತ್ತದೆ ಎಂದು ತಿಳಿ ಹೇಳಿದೆ. ಸದ್ಯ ಶಾಲೆಯಲ್ಲಿ 27 ಮಕ್ಕಳಿದ್ದಾರೆ. 1 ರಿಂದ 3ನೇ ತರಗತಿ ವರೆಗೆ ನಲಿಕಲಿ ಪಾಠ ಮಾಡುತ್ತಿದ್ದೇವೆ. ಒಂದನೇ ತರಗತಿಯಿಂದಲೂ ಇಂಗ್ಲಿಷ್, ಗಣಿತ ಮತ್ತು ಪರಿಸರ ಅಧ್ಯಯನ ಕಲಿಸುತ್ತಿದ್ದೇವೆ" ಎಂದು ಮಾಹಿತಿ ನೀಡಿದರು.
ಶಾಲೆಗೆ ಇದೆ ಶಿಕ್ಷಕರ ಕೊರತೆ: ಮಾಜಿ ಎಸ್ಡಿಎಂಸಿ ಅಧ್ಯಕ್ಷ ತುಳಜಾ ನಾಯ್ಕ ಮಾತನಾಡಿ, "1962ರಲ್ಲಿ ಪ್ರಾರಂಭವಾದ ಶಾಲೆ ಇದು. ಪ್ರಸ್ತುತ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಾಲೆಯಲ್ಲಿನ ಸಮಸ್ಯೆಗಳಿಂದ ಪೋಷಕರು ಮಕ್ಕಳನ್ನು ಬೇರೆ ಕಡೆ ಸೇರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಸಹಕಾರ ಕೊಟ್ಟು ಅಭಿವೃದ್ಧಿ ಪಡಿಸಿದ್ದೇವೆ. ಬೇರೆ ಕಡೆ ಕೆಲಸ ಮಾಡುತ್ತಿದ್ದ ಶಿಕ್ಷಕ ಲಕ್ಷ್ಮಿ ನಾರಾಯಣ ಅವರು ಈ ಶಾಲೆಗೆ ಬಂದು ಅಭಿವೃದ್ಧಿ ಮಾಡಲು ಬಯಸಿದ್ದಾರೆ. ಸದ್ಯ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಈಗ ಅಥಿತಿ ಶಿಕ್ಷಕರೊಬ್ಬರನ್ನು ನೇಮಕ ಮಾಡಿಕೊಂಡು ಪಾಠ ಮಾಡಿಸಲಾಗುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ದಾವಣಗೆರೆ: ಶಿಥಿಲಾವಸ್ಥೆ ತಲುಪಿದ ಸ್ವಾತಂತ್ರ್ಯ ಪೂರ್ವದ ಪ್ರೌಢಶಾಲೆ; ನೂತನ ಕಟ್ಟಡಕ್ಕೆ ಆಗ್ರಹ