ಕರ್ನಾಟಕ

karnataka

ETV Bharat / state

ದಾವಣಗೆರೆ: ಅಮೆರಿಕಾದಲ್ಲಿ ಮೃತ ದಂಪತಿ ಮನೆಗೆ ಜಿಲ್ಲಾಧಿಕಾರಿ ಭೇಟಿ... ತಾಯ್ನಾಡಿಗೆ ಮೃತದೇಹ ತರಿಸುವಂತೆ ತಾಯಿಯ ಮನವಿ - ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವು

ಅಮೆರಿಕಾದಲ್ಲಿ ಮೃತ ದಂಪತಿಯ ಮನೆಗೆ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂವಿ ಭೇಟಿ ನೀಡಿ ಸಾಂತ್ವನ ಹೇಳಿದರು. ಇದೇ ವೇಳೆ ಮೃತ ಯೋಗೇಶ್​ ತಾಯಿ ದಾವಣಗೆರೆಗೆ ಮೃತದೇಹ ತರಿಸುವಂತೆ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.

suspicious-death-of-davanagere-couple-in-america-dc-visited-house
ಅಮೆರಿಕಾದಲ್ಲಿ ಮೃತ ದಂಪತಿ ಮನೆಗೆ ಜಿಲ್ಲಾಧಿಕಾರಿ ಭೇಟಿ : ತಾಯ್ನಾಡಿಗೆ ಮೃತದೇಹ ತರಿಸುವಂತೆ ತಾಯಿಯ ಮನವಿ

By

Published : Aug 20, 2023, 5:48 PM IST

Updated : Aug 20, 2023, 7:00 PM IST

ಅಮೆರಿಕಾದಲ್ಲಿ ಮೃತ ದಂಪತಿ ಮನೆಗೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ: ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮನೆಗೆ ಇಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂವಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಮೃತ ಯೋಗೇಶ್​ ಅವರ ತಾಯಿ ಶೋಭಾ ಅವರು ಮೃತದೇಹಗಳನ್ನು ತಾಯ್ನಾಡಿಗೆ ತರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಮೆರಿಕಾದಲ್ಲಿ ವಾಸವಾಗಿದ್ದದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿತ್ತು. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ್ (37), ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, 9 ವರ್ಷಗಳ ಹಿಂದೆ ಯೋಗೇಶ್ ಹಾಗೂ ಪ್ರತಿಭಾ ಮದುವೆಯಾಗಿದ್ದರು. ಬಳಿಕ ಅಮೆರಿಕಾಗೆ ತೆರಳಿದ್ದರು. ಯೋಗೇಶ್ ಮತ್ತು ಅವರ ಪತ್ನಿ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್​ ಆಗಿದ್ದು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು.‌ ಇಂದು ಮೃತ ಯೋಗೇಶ್​ ಕುಟುಂಬಸ್ಥರ ಮನೆಗೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ, ತಹಶೀಲ್ದಾರ್ ಅಶ್ವಥ್ ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂವಿ, ಅಮೆರಿಕದ ಬಾಲ್ಟಿಮೋರ್​ನಲ್ಲಿ ಅಸ್ವಾಭಾವಿಕ ಸಾವು ಸಂಭವಿಸಿದೆ‌. ಕುಟುಂಬದ ಕೋರಿಕೆ ಮೇರೆಗೆ ಅಮೆರಿಕದಲ್ಲಿರುವ ಕಾನ್ಸಲೆಟ್ ಜನರಲ್ ಮಂಜುನಾಥ್, ಡೆಪ್ಯೂಟಿ ಜನರಲ್ ವರುಣ್ ಅವರನ್ನು ಆನ್ ಲೈನ್ ಮುಖಾಂತರ ಸಂಪರ್ಕ ಮಾಡಿದ್ದೇವೆ. ಈ ಸಂಬಂಧ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನಿಸಲಾಗಿದೆ. ಮೃತದೇಹವನ್ನು ದಾವಣಗೆರೆಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಾವನ್ನು ಅಮೆರಿಕಾದ ಸ್ಥಳೀಯ ಪೊಲೀಸರು ಅಸ್ವಾಭಾವಿಕ ಸಾವು ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳಲು ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ. ತನಿಖೆ ಪೂರ್ಣಗೊಳಿಸಿದ ನಂತರ ಮೃತದೇಹ ತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ. ತನಿಖೆಯಿಂದ ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಿದರು.

ಇನ್ನು, ಕುಟುಂಬಸ್ಥರು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಗುಂಡು ಹಾರಿಸಿಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕಾದಲ್ಲಿರುವ ಕುಟುಂಬಸ್ಥರ ಸಂಬಂಧಿಯೋರ್ವರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಗಸ್ಟ್ 15ರಂದು ರಾತ್ರಿ ಘಟನೆ ಜರುಗಿದ್ದು, ಆಗಸ್ಟ್ 18ರಂದು ಪೊಲೀಸರ ಮಾಹಿತಿಯಿಂದ ಘಟನೆ ಬೆಳಕಿಗೆ ಬಂದಿತ್ತು.‌

ಇದನ್ನೂ ಓದಿ :ದಾವಣಗೆರೆ ಮೂಲದ ದಂಪತಿ, ಮಗು ಅಮೆರಿಕಾದಲ್ಲಿ ನಿಗೂಢ ಸಾವು: ಸ್ವದೇಶಕ್ಕೆ ಮೃತದೇಹ ತರಲು ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರ ಮನವಿ

Last Updated : Aug 20, 2023, 7:00 PM IST

ABOUT THE AUTHOR

...view details