ದಾವಣಗೆರೆ: ಈಗಾಗಲೇ ಕಾಂಗ್ರೆಸ್ನಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದರೂ ಹರಿಹರದ ಹಾಲಿ ಶಾಸಕ ಎಸ್ ರಾಮಪ್ಪ ಅವರ ಹೆಸರು ಮಾತ್ರ ಇನ್ನೂ ಘೋಷಣೆಯಾಗದಿರುವುದು ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಕಾಂಕ್ಷಿತರಲ್ಲಿ ಒಬ್ಬರಿಗೆ ಟಿಕೆಟ್ ಕೊಡಲಾಗುವುದು ಎಂಬ ಹೈಕಮಾಂಡ್ ಸೂಚಿಸಿದ್ದು, ಆದರೆ ಇಡೀ ಹರಿಹರ ಕಾಂಗ್ರೆಸ್ ನ ಕಾರ್ಯಕರ್ತರು ಹಾಗು ಮುಖಂಡರು ಹಾಲಿ ಶಾಸಕ ಎಸ್ ರಾಮಪ್ಪ ಅವರಿಗೆ ಕೈ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದಲ್ಲದೇ ತನಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಹಾಲಿ ಶಾಸಕ ಎಸ್ ರಾಮಪ್ಪ ಅವರು ಕಾಲಿಗೆ ಚಕ್ರಕಟ್ಟಿಕೊಂಡು ಇಡೀ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ರಾಮಪ್ಪನವರಿಗೆ ಟಿಕೆಟ್ ಮಾತ್ರ ಇನ್ನೂ ಘೋಷಣೆ ಆಗದಿರುವುದಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೈ ಟಿಕೆಟ್ ವಿಚಾರವಾಗಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮಪ್ಪ ಅವರ ಬೆಂಬಲಿಗ ಹಾಗೂ ಕಾಂಗ್ರೆಸ್ ಮುಖಂಡ ಆರ್ ವಿಜಯ್ ಕುಮಾರ್ ಅವರು, ರಾಮಪ್ಪನವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ, ಇಷ್ಟರೊಳಗೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಬೇಕಿತ್ತು. ಹರಿಹರ ಕ್ಷೇತ್ರದ ಟಿಕೆಟ್ ಘೋಷಣೆ ಆಗದಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಮನವಿಯನ್ನೂ ಮಾಡಿದ್ದು, ರಾಮಪ್ಪನವರಿಗೆ ಟಿಕೆಟ್ ಘೋಷಣೆ ಮಾಡದೆ ಇದ್ರೇ, ಹರಿಹರದಲ್ಲಿ ಕಾಂಗ್ರೆಸ್ 20 ವರ್ಷಗಳ ಹಿಂದೆ ಹೋಗುವುದು ಖಂಡಿತ. ರಾಮಪ್ಪನವರು ಪಕ್ಷ ಸಂಘಟನೆ ದೃಷ್ಟಿಯಿಂದ ಟಿಕೆಟ್ ಘೋಷಣೆ ಮಾಡ್ಬೇಕಾಗಿದೆ. ನಮ್ಮ ನಾಯಕರನ್ನು ಬಂಡಾಯ ಏಳುವಂತೆ ನಾವ್ಯಾಕೆ ಮಾಡ್ಬೇಕು. ರಾಮಪ್ಪನವರು ಪ್ರಾಮಾಣಿಕ ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್ ನಾಯಕರು ಮೊದಲ ಲಿಸ್ಟ್ನಲ್ಲೇ ಟಿಕೆಟ್ ಘೋಷಣೆ ಮಾಡಬೇಕಿತ್ತು. ಇಲ್ಲವಾಗಿದ್ದಲ್ಲಿ ಮುಂದಿನ ನಡೆ ಬಗ್ಗೆ ನಮ್ಮ ನಾಯಕ ಎಸ್ ರಾಮಪ್ಪನವರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.