ದಾವಣಗೆರೆ: ಬೆಂಗಳೂರಿನ ಸಂಜಯನಗರದ ಸುಮನಾ ಫೌಂಡೇಶನ್‌ನ ತಂಡವೊಂದು ಸದ್ದಿಲ್ಲದೇ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡ್ತಿದೆ. ಸುಣ್ಣಬಣ್ಣ ಕಾಣದ ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಈ ತಂಡ ಹಲವು ದಿನಗಳ ಕಾಲ ಉಳಿದುಕೊಂಡು ಜನ ಮೆಚ್ಚುಗೆಯ ಕೆಲಸ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೂ ಇದೇ ತಂಡ ಜನರು ತಿರುಗಿ ನೋಡುವಂತೆ ಮಾಡಿದೆ.
ರಾಜ್ಯಾದ್ಯಂತ ಸಂಚರಿಸುವ ಸುಮನಾ ಫೌಂಡೇಶನ್‌ನ ಸದಸ್ಯರು ಇಲ್ಲಿಯತನಕ ಒಟ್ಟು 53 ಸರ್ಕಾರಿ ಶಾಲೆಗಳಿಗೆ ಆಕರ್ಷಕ ವಿನ್ಯಾಸ ನೀಡಿದ್ದಾರೆ. ದೇವರಬೆಳಕೆರೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಉಳಿದುಕೊಂಡು ತಮ್ಮ ಸ್ವಂತ ಖರ್ಚಿನಲ್ಲೇ ಬಣ್ಣ ಬಳಿದು, ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಿದ್ದಾರೆ. ಇವರ ಕೆಲಸಕ್ಕೆ ಗ್ರಾಮಸ್ಥರು ಕೂಡ ಬೆಂಬಲ ಕೊಟ್ಟಿದ್ದು, ಊಟ ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.
ಸುಮನಾ ಫೌಂಡೇಶನ್ ಸಂಸ್ಥಾಪಕಿ ಸುನಿತಾ ಮಂಜುನಾಥ್ ಪ್ರತಿಕ್ರಿಯಿಸಿ, 'ದಾವಣಗೆರೆಗೆ 20 ಜನರ ತಂಡ ಬಂದಿದ್ದು, ಸುಮನಾ ಸುಂದರ ಮನಸ್ಸಿನ ನಾಗರಿಕರು ಎಂಬ ಅರ್ಥದಲ್ಲಿ ಈ ಕಾರ್ಯ ಮಾಡುತ್ತಾ ಬಂದಿದ್ದೇವೆ. ಇಲ್ಲಿಯತನಕ 53 ಶಾಲೆಗಳನ್ನು ಸುಂದರೀಕರಣ ಮಾಡಿದ್ದೇವೆ. ದೇವರಬೆಳಕೆರೆ ಶಾಲೆಯ ಗೋಡೆಗಳ ಮೇಲೆ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಚಿತ್ರಿಸಲಾಗಿದೆ' ಎಂದರು.
ಇದನ್ನೂ ಓದಿ:ಶಾಲೆ ಗೋಡೆಯಲ್ಲಿ ಅರಳಿದ ನಾಡ ಬಾವುಟ.. ಹೊಸ ರಂಗು ನೀಡಿದ ಗೆಳೆಯರ ಬಳಗ