ದಾವಣಗೆರೆ/ಶಿವಮೊಗ್ಗ:ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಿಂದ ಇಡೀ ದೇಶದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಜನವಸತಿ ಪ್ರದೇಶಗಳ ಮೇಲೂ ಗುಂಡಿನ ದಾಳಿ ನಡೆಯುತ್ತಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ.
ಸುಡಾನ್ ದೇಶದ ಅಲ್ಫಷೀರ್ ನಗರದಲ್ಲಿ ದಾವಣಗೆರೆ ಜಿಲ್ಲೆಯ 5 ಜನ ಸೇರಿ ಕರ್ನಾಟಕದ ಒಟ್ಟು 31 ಮಂದಿ ಸಿಲುಕಿಕೊಂಡಿದ್ದಾರೆ. ಸ್ವತಃ ಅವರುಗಳೇ ಫೋಟೋ, ವಿಡಿಯೋಗಳನ್ನು ಕಳಿಸುವ ಮೂಲಕ ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತೀಯರು ನೆಲೆಸಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಆಹಾರ, ನೀರಿಗೂ ಪರಿತಪಿಸುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕರ್ನಾಟಕದ 31 ಮಂದಿಯಲ್ಲಿ ಶಿವಮೊಗ್ಗದ 7, ದಾವಣಗೆರೆ ಜಿಲ್ಲೆ ಚನ್ನಗಿರಿಯ 5, ಮೈಸೂರು ಜಿಲ್ಲೆಯ ಹುಣಸೂರಿನ 19 ಜನ ಸಿಲುಕಿಕೊಂಡಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಅರಸಿ ಸುಡಾನ್ಗೆ ತೆರಳಿದ್ದರು. ಸದ್ಯ ಗುಂಡಿನ ದಾಳಿಗಳು ನಡೆಯುತ್ತಿರುವುದರಿಂದ ಮಹಿಳೆಯರು ಆತಂಕದಲ್ಲಿದ್ದಾರೆ.
ವಾಸವಿರುವ ಕಟ್ಟಡದ ಮೇಲೂ ಗುಂಡಿನ ದಾಳಿ ನಡೆಸಲಾಗಿದ್ದು, ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಸರ್ಕಾರ ನಮ್ಮನ್ನು ಇಲ್ಲಿಂದ ತೆರವು ಮಾಡಲು ನೆರವು ನೀಡಬೇಕು. ಸುಡಾನ್ನಲ್ಲಿ ಸಿಲುಕಿರುವ 31 ಜನ ಕನ್ನಡಿಗರಲ್ಲಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ತೆರಳಿದ್ದರು ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಶಿವಮೊಗ್ಗದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 7 ಮಂದಿಯೂ ಸುಡಾನ್ನಲ್ಲಿ ಸಿಲುಕಿದ್ದಾರೆ. ನಾವು ಕನ್ನಡಿಗರು, ಆಫ್ರಿಕಾದ ಸುಡಾನ್ ದೇಶದ ಅಲ್ಪಷೇರ್ ಸಿಟಿಯಲ್ಲಿ ಉಳಿದುಕೊಂಡಿದ್ದೇವೆ. 10 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ಕಳೆದ 3 ದಿನಗಳಿಂದ ಫೈರಿಂಗ್ ಪ್ರಾರಂಭವಾಗಿದೆ. ನಾವಿರುವ ಮನೆಯ ಸುತ್ತಮುತ್ತ ಗುಂಡಿನ ದಾಳಿ ಆಗ್ತಾ ಇದೆ. ಇದರ ಜೊತೆಗೆ ಬಾಂಬ್ ಸದ್ದು ಕೂಡ ಕೇಳಿ ಬರುತ್ತಿದೆ. ಏರ್ಪೋರ್ಟ್ ನಾಶವಾಗಿವೆ. ದೊಡ್ಡ ದೊಡ್ಡ ಸಿಟಿಗಳು ನಾಶವಾಗಿವೆ. ಊಟ, ತಿಂಡಿ, ಕುಡಿಯುವ ನೀರೂ ಸಹ ಇಲ್ಲವಾಗಿದೆ ಎಂದು ವಿಡಿಯೋದಲ್ಲಿ ತಮ್ಮ ಸಂಕಷ್ಟವನ್ನು ಸಂತ್ರಸ್ತರು ತೋಡಿಕೊಂಡಿದ್ದಾರೆ.