ದಾವಣಗೆರೆ:ಅವರು ಓದಿದ್ದು ಹತ್ತನೆ ತರಗತಿ. ಆದರೆ, ಅರಣ್ಯ ಕೃಷಿಯಲ್ಲಿ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ತಂದೆಯ ಆಸೆಯಂತೆ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿ ರೈತರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣ ಗ್ರಾಮದ ವೆಂಕಟರಾಂಜನೇಯ ಅವರ ತೋಟ ಇದೀಗ ಜಗತ್ ಪ್ರಸಿದ್ದಿ ಪಡೆದಿದ್ದು, ತೋಟ ಕಣ್ತುಂಬಿಕೊಳ್ಳಲು ಕೆಲವರು ದೇಶ - ವಿದೇಶಗಳಿಂದ ಆಗಮಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸತ್ಯನಾರಾಯಣಪುರ ಗ್ರಾಮದ ವೆಂಕಟರಾಮಾಂಜನೇಯ ಅವರ ತಂದೆ ಸುಬ್ಬರಾಯರ ಕನಸನ್ನು ನನಸು ಮಾಡಿದ್ದಾರೆ. ತಮ್ಮ ಹತ್ತು ಎಕರೆ ತೋಟದಲ್ಲಿ ಅರಣ್ಯ ಕೃಷಿ ಹಾಗೂ ಸಮಗ್ರ ಕೃಷಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಸತ್ಯನಾರಾಯಣಪುರ ಗ್ರಾಮದಲ್ಲಿ ಪ್ರಗತಿಪರ ರೈತ ವೆಂಕಟರಾಮಾಂಜನೇಯ ಎಂದೇ ಚಿರಪರಿಚಿತರಾಗಿರುವ ಇವರು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
ಇವರ ಹತ್ತು ಎಕರೆ ತೋಟದಲ್ಲಿ 120 ತರಹೆವಾರಿಯ ಅರಣ್ಯ ಮರಗಳು, ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ. ಅರಣ್ಯ ಕೃಷಿಯಲ್ಲಿ ಸಾಗವಾನಿ, ಮಹಾಗನಿ, ಬೇವು, ಹೆಬ್ಬೇವು, ರಕ್ತ ಚಂದನ, ಶ್ರೀಗಂಧ, ಬಿದಿರು, ಬೀಟೆ, ಮತ್ತಿ ಮರಗಳನ್ನು ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ. ಇನ್ನು ಇದಲ್ಲದೆ ಅಡಕೆ ತೋಟ ಮಾಡಿರುವ ಇವರು ಸಾಕಷ್ಟು ಫಸಲು ಪಡೆಯುತ್ತಿದ್ದಾರೆ. ಇನ್ನು ಈ ತೋಟದಲ್ಲಿ ತೆಂಗು, ಕೊಕ್ಕೊ, ಅಡಕೆ ಸೇರಿದಂತೆ ವರ್ಷ ಪೂರ್ತಿ ಕೈಗೆ ಎಟಕುವ ಹಣ್ಣುಗಳ ತಳಿಗಳನ್ನು ಇವರು ಬೆಳೆಸಿದ್ದಾರೆ.
ತೋಟದಲ್ಲಿವೆ 72 ತರಹೆವಾರಿ ಹಣ್ಣುಗಳು:ಇವರ ತೋಟದಲ್ಲಿ ದೇಸಿ ವಿದೇಶಿ ತಳಿಗಳನ್ನು ತರುವ ಮೂಲಕ ಸೀತಾಫಲ, ರಾಮ ಫಲ, ಲಕ್ಷ್ಮಣ ಫಲ, ಹನುಮಾನ್ ಫಲ, ನೇರ್ಲೆ ಹಣ್ಣು, ಮೋಸಂಬಿ, ಚಕ್ಕೋತ್ತ, ಆರೆಂಜ್, ದದ್ಲಿ ಕಾಯಿ, ನಿಂಬೆ, ಗಜ ನಿಂಬೆ, ಎರಡು ರೀತಿಯ ಸಫೋಟ, 30 ಬಗೆಯ ಮಾವಿನ ಹಣ್ಣು, ಸೀಬೆಕಾಯಿ, ಬಾಳೆ, ಸಿಹಿ ಹುಣಸೆ, ಹಲಸಿನ ಹಣ್ಣು, ಮಲೆಯ ಆ್ಯಪಲ್, ವಾಟರ್ ಆ್ಯಪಲ್, ಅಂಜೂರ್, ಸೂರ್ ನಮ್ ಸರ್, ಬಾಡ್ಬರ್ರಸ್ಸರೀ, ಗೋಡಂಬಿ, ನೆಲ್ಲಿಕಾಯಿ ಹೀಗೆ ಹೇಳಿಕೊಂಡು ಹೋದ್ರೇ ಅದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.
ಇವರ ತೋಟದಲ್ಲಿ ಒಟ್ಟು 72 ತರಹೆವಾರಿ ಹಣ್ಣುಗಳನ್ನು ಇವರು ಬೆಳೆಸಿದ್ದಾರೆ. ಇದಲ್ಲದೆ ಚಕ್ಕೆ, ಲವಂಗ, ಕರಿಮೆಣಸು ಈ ಎಲ್ಲ ಪದಾರ್ಥಗಳಿರುವ ವಿಶೇಷ ತಳಿಯನ್ನು ಬೆಳೆಸಿರುವುದು ವಿಶೇಷ.
ಇಲ್ಲಿರುವ ಹಣ್ಣು ಕೆಲ ರೋಗಗಳಿಗೆ ರಾಮಬಾಣ:ಮಾದರಿ ರೈತ ವೆಂಕಟರಾಮಾಂಜನೇಯ ಅವರು ಬೆಳೆದಿರುವ ಒಟ್ಟು 72 ತರಹೆವಾರಿ ಹಣ್ಣುಗಳು ಒಂದೊಂದು ರೋಗಕ್ಕೆ ರಾಮಬಾಣವಾಗಿದೆ. ಮಧುಮೇಹ ರೋಗಿಗಳು ಇಲ್ಲಿ ಬೆಳೆದಿರುವ ನೇರ್ಲೆ ಹಣ್ಣನ್ನು ಸೇವಿಸಿದ್ರೆ ಶುಗರ್ ಕಡಿಮೆಯಾಗುತ್ತದಂತೆ.