ದಾವಣಗೆರೆ: ಕಾಲೇಜು ಆಡಳಿತ ಮಂಡಳಿಯು ಕೆಲ ಶಿಕ್ಷಕರನ್ನು ಸೇವೆಯಿಂದ ತೆಗೆದು ಹಾಕಿದ್ದು, ಆಡಳಿತ ಮಂಡಳಿಯ ನಿರ್ಧಾರ ವಿರೋಧಿಸಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ಹೊರವಲಯದ ನಗರದ ಬಾಡಾ ಕ್ರಾಸ್ ಬಳಿಯ ಜೈನ್ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ದಾವಣಗೆರೆ ನಗರದ ಹೊರವಲಯದಲ್ಲಿರುವ ಜೈನ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು. ಈ ವೇಳೆ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕಿ ಶಶಿಕಲಾ ಅವರನ್ನು ಜೈನ್ ಕಾಲೇಜು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ಕಾರಣವಿಲ್ಲದೆ ಏಕಾಏಕಿ ಕಾಲೇಜಿನಿಂದ ವಜಾ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆ ಕಾಲೇಜು ಹೊರಗಡೆ ವಿದ್ಯಾರ್ಥಿಗಳು ಪ್ರತಿಭಟನೆಯ ಮೊರೆ ಹೋಗಿದ್ದರು.