ದಾವಣಗೆರೆ: ನಮ್ಮ ದೇಶದಲ್ಲಿ ತಂದೆ-ತಾಯಿಯ ನಂತರದ ಸ್ಥಾನ ಗುರುಗಳಿಗೆ. ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಂತೂ ತಮ್ಮ ಶಾಲೆಯ ಶಿಕ್ಷಕರೊಂದಿಗೆ ಸುಸಂಬಂಧ ಹೊಂದಿರುತ್ತಾರೆ. ಅದರಂತೆ, ಇದೀಗ ತಮ್ಮ ನೆಚ್ಚಿನ ಶಿಕ್ಷಕನ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಕೊಂಡಜ್ಜಿ ಬಸಪ್ಪ ಅನುದಾನಿತ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಶಾಲೆಯ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಪಾಟೀಲ್ ಎಂಬವರನ್ನು ಧಿಡೀರ್ ವರ್ಗಾವಣೆ ಮಾಡಲಾಗಿತ್ತು. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಈಗಾಗಲೇ ವರ್ಗಾವಣೆಯಾಗಿರುವ ಶಿಕ್ಷಕರು ದೂರವಾಣಿ ಮೂಲಕ ಕರೆ ಮಾಡಿ ಮಕ್ಕಳಿಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ ಪಟ್ಟುಬಿಡದ ಮಕ್ಕಳು ಶಿಕ್ಷಕರನ್ನು ವಾಪಸ್ ಕರೆಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ 12 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್ ಪಾಟೀಲ್ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದು ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳು ಶೂಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಅಂತಹ ಮಕ್ಕಳಿಗೆ ಸ್ವತಃ ತಮ್ಮ ಹಣದಿಂದ ಶೂ ಕೊಡಿಸುವ ಮೂಲಕ ಕ್ರೀಡೆಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸುತ್ತಿದ್ದರು. ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದ ಶಿಕ್ಷಕನ ವರ್ಗಾವಣೆಯಿಂದ ವಿದ್ಯಾರ್ಥಿಗಳು ಬೇಸರಗೊಂಡಿದ್ದಾರೆ. ಪ್ರತಿಭಟನೆಗೆ ಪೋಷಕರೂ ಕೂಡಾ ಸಾಥ್ ಕೊಟ್ಟಿದ್ದರು.
ಶಾಲಾ ಅಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವ ಪ್ರಯತ್ನ ನಡೆಸಿತು. ಹೀಗಿದ್ದರೂ ವಿದ್ಯಾರ್ಥಿಗಳು ಮಾತ್ರ ಒಪ್ಪುತ್ತಿಲ್ಲ. ಸಿರಿಗೆರೆ ತರಳಬಾಳು ಮಠದ ಆಡಳಿತಕ್ಕೊಳಪಟ್ಟಿರುವ ಈ ಶಾಲೆಯ ಐವರು ಶಿಕ್ಷಕರನ್ನು ರಾಜ್ಯದ ವಿವಿಧ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ದೈಹಿಕ ಶಿಕ್ಷಕ ಬಸವರಾಜ್ ಪಾಟೀಲ್ರನ್ನು ಹಾಸನ ಜಿಲ್ಲೆಯ ಬೇಲೂರಿನ ಶಾಲೆಯೊಂದಕ್ಕೆ ವರ್ಗಾಯಿಸಲಾಗಿದೆ.