ದಾವಣಗೆರೆ:ಉಪಹಾರ ಸೇವಿಸಿದ 12 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿಯುತ ಶಾಲೆಯಲ್ಲಿ ಸೋಮವಾರ ನಡೆದಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಮೊದಲು ಶಾಲಾ ಸಿಬ್ಬಂದಿ ಸಂತೇಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇರು ವಿದ್ಯಾರ್ಥಿಗಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಆಸ್ಪತ್ರೆಗೆ ಬೇಟಿ ನೀಡಿ ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯರೊಂದಿಗೆ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಬಿರಿಯಾನಿ ತಿಂದು 17 ಜನ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಈ ಹಿಂದಿನ ಪ್ರಕರಣಗಳು- ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಗ್ರಾಮವೊಂದರಲ್ಲಿ ನ.21 ರಂದು ಈ ಘಟನೆ ನಡೆದಿತ್ತು. ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಬಿರಿಯಾನಿ ತಯಾರಿಸಿದ್ದರು. ಈ ಬಿರಿಯಾನಿಯನ್ನು ಮರುದಿನ ಜನರು ಸೇವಿಸಿದ್ದರು. ಹಿಂದಿನ ದಿನದ ಆಹಾರವಾದ್ದರಿಂದ ವಿಷಪೂರಿತವಾಗಿದೆ. ಹೀಗಾಗಿ ಸೇವಿಸಿದ 17 ಜನರು ಅಸ್ವಸ್ಥರಾಗಿದ್ದರು. ಕಡೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಸಿಹಿ ಪ್ರಸಾದ ತಿಂದು 20ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಮನಗರದ ದರ್ಗಾವೊಂದರಲ್ಲಿ ನಡೆದಿತ್ತು. ಎಂ.ಜಿ.ರಸ್ತೆಯಲ್ಲಿರುವ ಪಿಎಸ್‌ವಿ ದರ್ಗಾದಲ್ಲಿ ನಡೆಯುತ್ತಿದ್ದ ಗಂಧ ಮಹೋತ್ಸವದಲ್ಲಿ ಪ್ರಸಾದ ವಿತರಿಸಲಾಗಿತ್ತು. ಪ್ರಸಾದ ಸೇವಿಸಿದ ನಂತರ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಕೆಲವರು ವಾಂತಿ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗು ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.