ದಾವಣಗೆರೆ/ರಾಯಚೂರು/ತುಮಕೂರು/ಧಾರವಾಡ: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಕೇಸ್ ಲೋಕಸಭಾ ಚುನಾವಣೆಯ ಬಿಸಿಯಲ್ಲಿ ಮುಚ್ಚಿ ಹೋಗಬಾರದು. ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ನಟಿ ಶೃತಿ ಆಗ್ರಹಿಸಿದರು.
ನಗರದಲ್ಲಿ ಮಾತನಾಡಿದ ಶೃತಿ, ವಿದ್ಯಾರ್ಥಿನಿ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು. ಮೃತಳ ತಾಯಿಯೇ ತನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆ ಮರಳಿ ನಡೆಯಬಾರದು ಎಂದರು.
ಇನ್ನು ರಾಯಚೂರಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸೀಗಬೇಕೆಂದು ಒತ್ತಾಯಿಸಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಟೈರ್ಗೆ ಬೆಂಕಿ ಹಚ್ಚುವ ಮೂಲಕ ರಸ್ತೆ ತಡೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನಲ್ಲಿಯೂ ನ್ಯಾಯಕ್ಕಾಗಿ ಪ್ರತಿಭಟಿಸಲಾಗಿದ್ದು, ವಿದ್ಯಾರ್ಥಿನಿ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಈ ಸಾವು ಆತ್ಮಹತ್ಯೆ ಅಲ್ಲ. ಹಾಗಾಗಿ ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಬೇಕಿದೆ ಎಂದು ಮಹಿಳಾ ಪರ ಸಂಘಟನೆಗಳು ನಗರದ ಖಾಸಗಿ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದವು.
ಎಐಎಂಎಸ್ಎಸ್ ಮತ್ತು ಎಐಡಿಎಸ್ಓ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ, ಚುನಾವಣೆ ಇರುವುದರಿಂದ ಈ ಪ್ರಕರಣವನ್ನು ಮುಚ್ಚಿ ಹಾಕುವ ಕೃತ್ಯ ನಡೆಯುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ತನಿಖೆ ನಡೆಸಬೇಕಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅಂತರ್ಜಾಲದಲ್ಲಿ ಅಶ್ಲೀಲ ವಿಡಿಯೋಗಳು ಹಾಗೂ ಅಶ್ಲೀಲ ವೆಬ್ಸೈಟ್ಗಳು ಹೆಚ್ಚಾಗಿರುವುದರಿಂದ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಎ.ಐ.ಯು.ಟಿ.ಯು.ಸಿ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಹೇಳಿದರು.
ಧಾರವಾಡದಲ್ಲಿಯೂ ಕೂಡಾ ವಿದ್ಯಾರ್ಥಿನಿ ಮರ್ಡರ್ ಕೇಸ್ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಆದೇಶ ನೀಡಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಿ ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ಘೊಷಿಸಬೇಕು ಎಂದು ಆಗ್ರಹಿಸಿ ಧಾರವಾಡ ವಿಶ್ವಕರ್ಮ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.