ಹರಿಹರ/ದಾವಣಗೆರೆ:ಅಧಿಕಾರಿಗಳು ತಮ್ಮ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಗೂ ಹೊಗದೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ನಮ್ಮ ದೇಶ ಹಾಗೂ ರಾಜ್ಯದಿಂದ ಈ ಕೊರೊನಾ ದೂರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಚನ್ನಗಿರಿ ತಾಲೂಕಿನಿಂದ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಸುಮಾರು 11 ಮಂದಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಕಳೆದ ರಾತ್ರಿ ಲಭ್ಯವಾಗಿದೆ. ಗ್ರಾಮಾಂತರ ಡಿವೈಎಸ್ಪಿ ಹಾಗೂ ಅವರ ತಂಡ ಚನ್ನಗಿರಿಗೆ ತೆರಳಿ ಅವರನ್ನು ಕರೆ ತಂದಿದ್ದಾರೆ. ಜಿಲ್ಲಾ ಸಿಜಿ ಆಸ್ಪತ್ರೆಯಲ್ಲಿ ಅವರೆಲ್ಲರನ್ನು ವಿಶೇಷ ಅವಲೋಕನದಲ್ಲಿಡಲಾಗಿದೆ. ಈಗಾಗಲೇ 11 ಮಂದಿಯನ್ನು ತಪಾಸಣೆ ನಡೆಸಲಾಗಿದ್ದು, ಅವಲೋಕನದಲ್ಲಿಡಲಾಗಿದೆ. ಒಟ್ಟಾರೆ ಚನ್ನಗಿರಿ ತಾಲೂಕಿನಿಂದ 12 ಮಂದಿ ದೆಹಲಿಗೆ ತೆರಳಿದ್ದರು. ಅವರಲ್ಲಿ 11 ಮಂದಿ ಸಂಪರ್ಕದಲ್ಲಿದ್ದಾರೆ. ಮತ್ತೊಬ್ಬರು ಹೊರ ರಾಜ್ಯದ ಮುಜಾಫರಾಬಾದ್ನಲ್ಲಿ ಅವಲೋಕನದಲ್ಲಿದ್ದಾರೆ. ಅವರೇ ಚನ್ನಗಿರಿಯಲ್ಲಿರುವವರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನಮ್ಮ ಪೊಲೀಸರು ಅವರನ್ನು ಕರೆ ತಂದಿದ್ದಾರೆ. ಇಲ್ಲಿಯವರೆಗೂ ಅವರೆಲ್ಲರೂ ಚನ್ನಗಿರಿಯಲ್ಲಿಯೇ ಇದ್ದರು. ಎಲ್ಲರೂ ಫೆಬ್ರವರಿ 28ಕ್ಕೆ ದೆಹಲಿಯಿಂದ ವಾಪಸ್ ಬಂದಿದ್ದಾರೆ. ಮಾರ್ಚ್ 28ರಂದು ಅವರೆಲ್ಲರೂ ದೆಹಲಿಗೆ ಹೋಗಿ ಬಂದು 1 ತಿಂಗಳಾಗಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೂ ಸಹ ಅವರನ್ನು ತಪಾಸಣೆ ಮಾಡಿ ವಿಶೇಷ ಅವಲೋಕನದಲ್ಲಿಡಲಾಗಿದೆ ಎಂದು ತಿಳಿಸಿದರು.