ಹರಿಹರ:ನಗರದ ಹೃದಯ ಭಾಗದ ಹಳೆ ಪಿ.ಬಿ ರಸ್ತೆಯ ವಿಭಜಕದ ಮಧ್ಯದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿರುವ ಬೀದಿ ದೀಪಗಳು ಬೆಳಗದೆ ಇರುವುದು ಕಳಪೆ ಕಾಮಗಾರಿ ಮಾಡಿರುವ ಅನುಮಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ನೂತನವಾಗಿ ಅಳವಡಿಸಿರುವ ಈ ಬೀದಿ ದೀಪಗಳನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ,ಶಾಸಕ ಎಸ್ ರಾಮಪ್ಪ ಹಾಗೂ ದೊಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾಜಿ ಶಾಸಕ ಬಿ.ಪಿ ಹರೀಶ್ ಮತ್ತು ನಗರಸಭಾ ಸದಸ್ಯರು ಸೇರಿ ಗುರುವಾರ ಸಂಜೆ ಉದ್ಘಾಟಿಸಿದರು. ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ರಸ್ತೆಯ ಅರ್ಧ ಭಾಗದ ಲೈಟ್ಗಳು ಬಂದ್ ಆಗಿವೆ. ಇನ್ನೂ ಮಾರನೆಯ ದಿನವಾದ ಶುಕ್ರವಾರ ರಾತ್ರಿ ಎಂಟು ಗಂಟೆಯಾದರು ಲೈಟ್ ಆನ್ ಆಗದೆ ಇರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ.
ಸುಮಾರು ಒಂದು ಕಿ.ಮೀ ಉದ್ದದಲ್ಲಿ ಒಟ್ಟು 51 ಕಂಬಗಳನ್ನು ಅಳವಡಿಸಿದ್ದು, ಪ್ರತೀ ಕಂಬಕ್ಕೆ 150 ವ್ಯಾಟ್ಸ್ ಪ್ರಕಾಶದ ಎರಡು ಎಲ್ಇಡಿ ಬಲ್ಫ್ ಜೊತೆಗೆ ಎರಡು ಕಂಬಗಳ ಮಧ್ಯ ಒಂದು ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ.