ಉಸ್ತುವಾರಿ ಸಚಿವರ ನೇಮಕದಲ್ಲಿ ಗೊಂದಲ ಇದ್ದೇ ಇರುತ್ತೆ: ಎಸ್ ಎಸ್ ಮಲ್ಲಿಕಾರ್ಜುನ್ ದಾವಣಗೆರೆ: ಉಸ್ತುವಾರಿ ಸಚಿವರ ನೇಮಕದಲ್ಲಿ ಗೊಂದಲ ಇದ್ದೇ ಇರುತ್ತೆ, ಒಂದೊಂದು ಜಿಲ್ಲೆಗೆ ಇಬ್ಬರು ಮೂರು ಜನ ಅಕಾಂಕ್ಷಿಗಳು ಇರ್ತಾರೆ. ಅದನ್ನೆಲ್ಲ ನಮ್ಮ ಹಿರಿಯ ಮುಖಂಡರು ಬಗೆಹರಿಸುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣಿಕಾರಿಕೆಯಿಂದ ಒಳ್ಳೆಯ ರೀತಿಯಿಂದ ಖಜಾನೆಗೆ ಆದಾಯ ಮತ್ತು ಖಜಾನೆಯನ್ನು ತುಂಬಿಸಲು ನಮ್ಮ ಇಲಾಖೆಯಿಂದ ಯಾವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕು ಎಂಬುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ. ಈಗಾಗಲೇ ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಸುಮಾರು 1 ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹೀಗಾಗಿ ನಮ್ಮ ನಮ್ಮ ಇಲಾಖೆಗಳಿಂದ ಹೆಚ್ಚು ಆದಾಯವನ್ನು ಗಳಿಸಬೇಕು. ಇದಕ್ಕೆ ನಮ್ಮ ಇಲಾಖೆಯಿಂದ ಏನೆಲ್ಲ ಮಾಡಬೇಕೋ ಅದನ್ನು ಮಾಡ್ತಿವಿ ಎಂದರು.
ಗಣಿಗಾರಿಕೆ ಟೆಂಡರ್ ಮುಗಿದು ಹೋಗಿದೆ, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅದನ್ನೆಲ್ಲ ತಡೆಗಟ್ಟಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ಗ್ಯಾರಂಟಿ ಯೋಜನೆ ಹಂತ ಹಂತವಾಗಿ ಜಾರಿಗೊಳಿಸುತ್ತೇವೆ. ಆಗಸ್ಟ್ 15ಕ್ಕೆ ಗೃಹ ಲಕ್ಷ್ಮೀ ಯೋಜನೆ ಮತ್ತು ಇದೇ ತಿಂಗಳಿನಿಂದ ಮಹಿಳೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ವಿದ್ಯುತ್ ಯೋಜನೆಗೆ ಅಂಕಿಅಂಶಗಳನ್ನು ಸಂಗ್ರಹಿಸಿ ಕಾರ್ಯರೂಪಕ್ಕೆ ತರುತ್ತೇವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಒಳ್ಳೆಯ ಆದಾಯ ಇದೆ ಮತ್ತು ಹೆಚ್ಚು ಸಂಪನ್ಮೂಲಗಳು ಇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಲ್ಲಿಕಾರ್ಜುನ್, ಅದರ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚಿಸಲಾಗುತ್ತದೆ. ಜನರಿಗೆ ಅನುಕೂಲವಾಗಬೇಕು, ನಮ್ಮ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕು ಎಂಬ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೆಲಸವನ್ನು ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರವನ್ನು ಚಕ್ರವರ್ತಿ ಸೂಲಿಬೆಲೆ ಹಿಟ್ಲರ್ ಸರ್ಕಾರ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹಿಟ್ಲರ್ ಸಂಸ್ಕೃತಿಯನ್ನು ನೋಡುತ್ತಿದ್ದಿರಲ್ಲ, ರೈಲು ದುರಂತದಲ್ಲಿ ನೂರಾರು ಜನ ಸಾವನ್ನಪ್ಪಿದ್ದಾರಲ್ಲ. ಸುಮ್ಮನೆ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಮೇಕ್ ಇನ್ ಇಂಡಿಯಾ ಏನಾಯ್ತು. ಒಳ್ಳೊಳ್ಳೆ ತಂತ್ರಜ್ಞಾನವನ್ನು ತಂದು ಅಳವಡಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಬ್ರಿಜ್ ಭೂಷಣ್ ಶರಣ್ ಸಿಂಗ್ರನ್ನು ಶೀಘ್ರವಾಗಿ ಬಂಧಿಸಬೇಕು: ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ
ಎಸ್ಎಸ್ ಮಲ್ಲಿಕಾರ್ಜುನ್ಗೆ ಅದ್ಧೂರಿ ಸ್ವಾಗತ ಕೋರಿದ ಕಾರ್ಯಕರ್ತರು:ದಾವಣಗೆರೆ ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾದ ಬಳಿಕ ನಿನ್ನೆ(ಶನಿವಾರ) ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ತೋಟಗಾರಿಕೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಹೊರವಲಯದ ಜಿಲ್ಲಾ ಪಂಚಾಯಿತಿ ಬಳಿ ಸಾವಿರಾರು ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಬೆಂಗಳೂರಿನಿಂದ ನೇರವಾಗಿ ದಾವಣಗೆರೆಗೆ ಆಗಮಿಸಿದ ಸಚಿವ ಮಲ್ಲಿಕಾರ್ಜುನ್ ಅವರು ಮಾಜಿ ಮುಖ್ಯಮಂತ್ರಿ ದಿ. ಜೆ ಹೆಚ್ ಪಟೇಲ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಂತರ ತೆರೆದ ವಾಹನದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ವಿವಿಧ ವೃತ್ತಗಳಲ್ಲಿ ಮೆರವಣಿಗೆ ನಡೆಸಿದ್ದರು.