ದಾವಣಗೆರೆ:ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸ್ವಾಮೀಜಿಗಳು ಭಕ್ತರ ಮನೆಗೆ ತೆರಳಿ ಶ್ರಾವಣ ಭಿಕ್ಷೆ, ದವಸ ಧಾನ್ಯ ಕೇಳುವುದು ವಾಡಿಕೆ. ಆದರೆ ಜಿಲ್ಲೆಯ ಶ್ರೀ ಬಸವಪ್ರಭು ಸ್ವಾಮೀಜಿಗಳು ಜನರಲ್ಲಿರುವ ದುಶ್ಚಟಗಳ ದುರಾಲೋಚನೆಯನ್ನು ದೂರ ಮಾಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಮದ್ಯದ ಬಾಟಲಿ, ಬೀಡಿ, ಗುಟ್ಕಾ ಕೇಳುವ ಮೂಲಕಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಜಿಲ್ಲೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಠಕ್ಕೋ, ಶಾಲೆಗೋ ದೇಣಿಗೆ ಕೊಡಿ ಎಂದು ಮನೆ ಮನೆ ಸುತ್ತುತ್ತಿಲ್ಲ. ಭಿಕ್ಷೆ ಬೇಡಿ ಲೋಕ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಈ ಸ್ವಾಮೀಜಿಗಳು ಮನೆ ಮನೆ ಸುತ್ತಿ ಮದ್ಯದ ಬಾಟಲ್, ಗುಟ್ಕಾ ಚೀಟಿ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುತ್ತಾರೆ. ಈ ಮೂಲಕ ಜನರಲ್ಲಿನ ದುಶ್ಚಟ ಮತ್ತು ದುರಾಲೋಚನೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕಾಗಿ ಶ್ರೀಗಳು ಕಳೆದ 11 ವರ್ಷದಿಂದ ಪ್ರತಿ ಶ್ರಾವಣದಲ್ಲಿ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.