ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ವಿಶೇಷಚೇತನ ರೂಪಾ ಅವರು ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ (ವಿಶೇಷಚೇತನರಿಗಾಗಿ ಆಯೋಜನೆ ಮಾಡುವ) ವಾಲಿಬಾಲ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ, ದುರಂತ ಎಂದರೇ ಕಜಕಿಸ್ತಾನ್ ನಡೆಯುವ ಈ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಲು ಆರ್ಥಿಕ ಸಂಕಷ್ಟ ಎದುರಾಗಿದ್ದು, ಹಣವಿಲ್ಲದೇ ರೂಪಾ ಕಜಕಿಸ್ತಾನಕ್ಕೆ ತೆರಳಲು ಆರ್ಥಿಕ ನೆರವಿಗಾಗಿ ಆಸರೆಯಾಗುವಂತೆ ವಿನಂತಿಸಿಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿಯಾದ ರೂಪಾ ಹುಟ್ಟು ವಿಶೇಷಚೇತನರಾಗಿದ್ದು, ಕಷ್ಟು ಪಟ್ಟು ವಿಕಲಾಂಗರ ಸಿಟ್ಟಿಂಗ್ ವಾಲಿಬಾಲ್ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗಿದ್ದಾರೆ. ಇದೀಗ ಈ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶ ದೊರೆತಿದ್ದರೂ ತಮ್ಮ ಪ್ರತಿಭೆ ಹೊರಹಾಕಲು ಆರ್ಥಿಕ ಸಂಕಷ್ಟ ಎದುರಾಗಿದೆ.
ಜೂನ್ ತಿಂಗಳಲ್ಲಿ ವಿಕಲಚೇತನರಿಗಾಗಿಯೇ ಸಿಟ್ಟಿಗ್ ವಾಲಿಬಾಲ್ ಟೂರ್ನಿ ಆಯೋಜನೆ ಮಾಡಲಾಗಿದ್ದು, ಕಜಕಿಸ್ತಾನಕ್ಕೆ ತೆರಳಲು ಸುಮಾರು ಮೂರು ಲಕ್ಷ ಹಣ ಬೇಕಾಗಿದೆ, ಬಡತನದಲ್ಲೇ ಜೀವನ ಸಾಗಿಸುತ್ತಿರುವ ರೂಪಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಜೀವನ ಕಟ್ಟಿಕೊಂಡಿದ್ದಾರೆ. ಇನ್ನು ಹಣ ಹಾಕಿ ಟೂರ್ನಿಗೆ ತೆರಳಲು ಕೈಯಲ್ಲಿ ಹಣ ಇಲ್ಲದೇ ಹೈರಾಣಾಗಿರುವ ರೂಪಾ ಜನಸಾಮಾನ್ಯರಿಂದ ಸಹಾಯ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಕ್ರೀಡಾಪಟು ರೂಪಾ ಮಾತನಾಡಿ, ಕಜಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಿಟ್ಟಿಂಗ್ ವಾಲಿಬಾಲ್ ಟೂರ್ನಿ ನಡೆಯಲಿದ್ದು ಅದರಲ್ಲಿ ಭಾಗವಹಿಸಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಲು ಸುಮಾರು 3 ಲಕ್ಷ ರೂ. ಹಣವನ್ನು ಕಟ್ಟಬೇಕು ಎಂದಾಗ ದಿಕ್ಕು ತೋಚದಂತಾಗಿದೆ, ಆರ್ಥಿಕ ಸಂಕಷ್ಟ ಎದುರಾಗಿದ್ದು, ಕೆಲಸ ಮಾಡಿ ಬರುವ 6 ಸಾವಿರ ಸಂಬಳದಲ್ಲಿ ಜೀವನ ಸಾಗಿಸಬೇಕು, ಜೊತೆಗೆ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಲು ಹಣದ ಅವಶ್ಯಕತೆ ಇದೆ. ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು.