ದಾವಣಗೆರೆ:ಮತ ಮಾರಾಟಿಕ್ಕಿಲ್ಲ ಎಂದು ಯುವಕರು ಸಂಕಲ್ಪ ಮಾಡ್ಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆದಂತೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರಲ್ಲಿ ಸಂದೇಶ ರವಾನಿಸಿದರು.
ದಾವಣಗೆರೆಯಲ್ಲಿ ನಡೆದ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಂಕಲ್ಪ ಮಾಡೋಣ. ನನ್ನ ಮತ ಮಾರಾಟಕ್ಕೆ ಇಲ್ಲ ಎಂದು ಯುವಕರು ಆಂದೋಲನ ಆರಂಭಿಸಬೇಕಾಗಿದೆ. ಈ ವ್ಯವಸ್ಥೆ ಹಗುರವಾಗಿ ನೋಡಿದ್ರೇ ಅರಾಜಕತೆ ನಿರ್ಮಾಣ ಆಗುತ್ತದೆ. ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದರು.
ಆ ದೇಶದಲ್ಲಿ ಆಹಾರ ಇಲ್ಲ. ನೀರು, ಪೆಟ್ರೋಲ್, ಡೀಸೆಲ್ ಸಿಗ್ತಿಲ್ಲ. ಎಲ್ಲ ಅಗತ್ಯ ವಸ್ತುಗಳನ್ನು ನಾವು ನಮ್ಮ ಭಾರತ ದೇಶದಿಂದ ಕಳುಹಿಸುತ್ತಿದ್ದೇವೆ. ಮತ ಮಾರಾಟಕ್ಕಿಲ್ಲ ಎಂದು ಯುವಕರು ಸಂಕಲ್ಪವನ್ನು ಮಾಡ್ಬೇಕು. ಇಲ್ಲವಾದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ. ನೀರು ಆಹಾರ ಪೆಟ್ರೋಲ್ ಡೀಸೆಲ್ಗಾಗಿ ಪರಿತಪಿಸಬೇಕಾಗುತ್ತದೆ ಎಂದು ಶ್ರೀಲಂಕಾದಲ್ಲಿ ತಲೆದೋರಿರುವ ಅರಾಜಕತೆ ಉದಾಹರಣೆ ನೀಡಿ ಯುವಕರೇ ಎಚ್ಚೆತ್ತುಕೊಳ್ಳಿ ಎಂದು ಕರೆ ನೀಡಿದರು.
ಎಲ್ಲ ಸರಿ ಇದೆ ಎಂದುಕೊಳ್ಳಬೇಡಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲ ಸರಿ ಇದೆ ಎಂದುಕೊಳ್ಳಬೇಡಿ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ದೋಷ, ದೌರ್ಬಲ್ಯ ನೋಡಿದ್ರೇ ಭಯ ಆಗುತ್ತೆ. ನ್ಯಾಯಾಂಗದಲ್ಲಿ ನ್ಯಾಯ ಸಿಗುವುದಿಲ್ಲ. ಬದಲಿಗೆ ಜಡ್ಜ್ಮೆಂಟ್ ಸಿಗುತ್ತೆ. ನಾನು ಕೂಡ ಅಲ್ಪಸ್ವಲ್ಪ ಲಾ ಓದಿದ್ದೇನೆ. ನ್ಯಾಯಾಂಗ ವ್ಯವಸ್ಥೆ ತನ್ನ ಮೌಲ್ಯವನ್ನು ಮೀರಿದೆ. ನ್ಯಾಯಾಂಗ ವ್ಯವಸ್ಥೆ ನಮ್ಮ ನಿರೀಕ್ಷೆಯಂತೆ ಇಲ್ಲ ಎಂದು ನ್ಯಾಯಾಂಗದ ಬಗ್ಗೆ ಪಾಠ ಮಾಡಿದ ಸ್ಪೀಕರ್, ನಿಮ್ಮ ಮತವನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ ಎಂದು ಯುವಕರಲ್ಲಿ ಕರೆ ನೀಡಿದರು. ಇನ್ನು ಹೆಂಡ ಎಂಬ ಪದವನ್ನು ಸರ್ಕಾರ ನಿಷೇಧ ಮಾಡಿದ್ರು, ಪ್ರತಿ ಮಾತಿಗೂ ಹೆಂಡ ಹೆಂಡ ಎಂದು ಸಾರಿ ಸಾರಿ ಹೇಳಿದರು.